ಚಿಕ್ಕಮಗಳೂರು: ಪಾಳು ಬಿದ್ದ ಕಟ್ಟಡದಲ್ಲಿ ಕೂಲಿ ಕಾರ್ಮಿಕನ ಮೃತದೇಹ ಪತ್ತೆ; ಕೊಲೆ ಶಂಕೆ

ಚಿಕ್ಕಮಗಳೂರು, ಜೂ.25: ಪಾಳು ಬಿದ್ದ ಕಟ್ಟಡವೊಂದರಲ್ಲಿ ವ್ಯಕ್ತಿಯೊಬ್ಬರ ಮೃತದೇಹ ರಕ್ತಸಿಕ್ತವಾಗಿ ಬಿದ್ದಿದ್ದ ಘಟನೆ ನಗರದ ಸಮೀಪದ ಕದ್ರಿಮಿದ್ರಿ ಬಡಾವಣೆಯಲ್ಲಿ ಶುಕ್ರವಾರ ಬೆಳಗ್ಗೆ ವರದಿಯಾಗಿದ್ದು, ಅಪರಿಚಿತರು ವ್ಯಕ್ತಿಯನ್ನು ಹತ್ಯೆ ಮಾಡಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ.
ತಾಲೂಕಿನ ಅಂಬಳೆ ಹೋಬಳಿಯ ಗೌಡನಹಳ್ಳಿ ಗ್ರಾಮದ ನಿವಾಸಿ ಕುಮಾರ್(28) ಮೃತ ವ್ಯಕ್ತಿಯಾಗಿದ್ದಾರೆ. ಮೃತ ಕುಮಾರ್ ಗಾರೆ ಕೆಲಸ ಮಾಡಿಕೊಂಡಿದ್ದು, ಕಳೆದ ಐದು ದಿನಗಳ ಹಿಂದೆ ಕೆಲಸಕ್ಕೆ ಹೋಗಿ ಬರುವುದಾಗಿ ಪತ್ನಿ ಬಳಿ ಹೇಳಿ ಹೋಗಿದ್ದ ಕುಮಾರ್ ಐದು ದಿನಗಳಾದರೂ ಮನೆಗೆ ಹಿಂದಿರುಗಿರಲಿಲ್ಲ. ಶುಕ್ರವಾರ ಬೆಳಗ್ಗೆ ಕದ್ರಿಮಿದ್ರಿಯ ಪಾಳುಬಿದ್ದ ಕಟ್ಟಡವೊಂದರಲ್ಲಿ ಕುಮಾರ್ ಮೃತದೇಹ ಪತ್ತೆಯಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮೃತ ದೇಹದ ಬಿದ್ದಿದ್ದ ಸ್ಥಳದಲ್ಲಿ ರಕ್ತ ಸುರಿದಿರುವುದು ಕಂಡು ಬಂದಿದೆ. ಕಟ್ಟಡದ ಸಮೀಪದಲ್ಲೇ ಕುಮಾರ್ ಕೆಲಸಕ್ಕೆಂದು ಕೊಂಡೊಯ್ದಿದ್ದ ಬಟ್ಟೆಗಳು ಪತ್ತೆಯಾಗಿವೆ. ಘಟನೆಯನ್ನು ಅವಲೋಕಿಸಿರುವ ಪೊಲೀಸರು ಕುಮಾರ್ ಅವರನ್ನು ಹತ್ಯೆ ಮಾಡಲಾಗಿದ್ದು, ಹತ್ಯೆಯಾಗಿ 2-3 ದಿನ ಕಳೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ತನಿಖೆ ಬಳಿಕ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಕುಮಾರ್ ಮೃಧು ಸ್ವಭಾವದ ವ್ಯಕ್ತಿಯಾಗಿದ್ದು, ತಾನಾಯಿತು ತನ್ನ ಕೆಲಸವಾಯಿತು ಎಂಬತೆ ಗ್ರಾಮದಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದನೆಂದು ಗ್ರಾಮಸ್ಥರು ತಿಳಿಸಿದ್ದು, ಆತನಿಗೆ ಯಾರೂ ಶತ್ರುಗಳಿರಲಿಲ್ಲ. ಆದರೂ ಏಕೆ ಕೊಲೆ ಮಾಡಲಾಗಿದೆಯೋ ತಿಳಿಯುತ್ತಿಲ್ಲ ಎಂದು ಕಂಬನಿ ಮಿಡಿಯುತ್ತಿದ್ದಾರೆ.
ಕುಮಾರ್ರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಪತ್ನಿ ಗರ್ಭಿಣಿಯಾಗಿದ್ದಾರೆ. ಪತಿಯ ಸಾವಿನ ಸುದ್ದಿ ಕೇಳಿ ಪತ್ನಿ ಪ್ರಜ್ಞೆ ತಪ್ಪಿದ್ದ ಘಟನೆಯೂ ಶುಕ್ರವಾರ ನಡೆದಿದ್ದು, ಕುಮಾರ್ ಮೃತದೇಹ ನೋಡಲು ಗ್ರಾಮಸ್ಥರು ಭಾರೀ ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ್ದರು.







