ಚೀನಾದ ಮಾರ್ಶಲ್ ಆರ್ಟ್ಸ್ ಶಾಲೆಯಲ್ಲಿ ಬೆಂಕಿ ದುರಂತ: 18 ಸಾವು, 16 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ
ಬೀಜಿಂಗ್, ಜೂ.25: ಮಧ್ಯಚೀನಾದ ಹೆನಾನ್ನಲ್ಲಿರುವ ಮಾರ್ಶಲ್ ಆರ್ಟ್ಸ್ ಶಾಲೆಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಅಗ್ನಿದುರಂತದಲ್ಲಿ ಕನಿಷ್ಟ 18 ಮಂದಿ ಸಾವನ್ನಪ್ಪಿದ್ದು 16 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಮೃತರಲ್ಲಿ ಬಹುತೇಕರು 7ರಿಂದ 16 ವರ್ಷದ ವಿದ್ಯಾರ್ಥಿಗಳು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಬೆಂಕಿ ಅನಾಹುತ ಸಂಭವಿಸಿದಾಗ ಶಾಲೆಯಲ್ಲಿ 34 ವಿದ್ಯಾರ್ಥಿಗಳಿದ್ದರು. ಬೆಂಕಿಯನ್ನು ನಂದಿಸಲಾಗಿದ್ದು ದುರಂತದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಶಾಲೆಯ ಮ್ಯಾನೇಜರ್ನನ್ನು ಬಂಧಿಸಲಾಗಿದೆ ಎಂದು ಶೆಚೆಂಗ್ ಪ್ರಾಂತ್ಯದ ಸರಕಾರ ಹೇಳಿದೆ. ಗಾಯಗೊಂಡವರಲ್ಲಿ 4 ಮಕ್ಕಳ ಸ್ಥಿತಿ ಗಂಭೀರವಾಗಿದ್ದು ಅವರನ್ನು ಉಳಿಸಲು ಗರಿಷ್ಟ ಪ್ರಯತ್ನ ನಡೆಸಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
ಚೀನಾದಲ್ಲಿ ಅಗ್ನಿದುರಂತದ ವಿರುದ್ಧದ ಸುರಕ್ಷಾ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಅಲ್ಲಿ ಅಗ್ನಿದುರಂತದಿಂದ ಪ್ರಾಣಹಾನಿಯಾಗುವ ಘಟನೆಗಳು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಅಗ್ನಿಸುರಕ್ಷತಾ ಕ್ರಮಗಳ ಪಾಲನೆಗೆ ಕಠಿಣ ಮಾರ್ಗಸೂಚಿ ಜಾರಿಯಾಗಬೇಕೆಂದು ಆಗ್ರಹಿಸಿ ಸಾಮಾಜಿಕ ಮಾಧ್ಯಮ ಬಳಕೆದಾರರು ಆರಂಭಿಸಿದ ಅಭಿಯಾನವನ್ನು ಕೆಲವೇ ಗಂಟೆಯಲ್ಲಿ 1.5 ಮಿಲಿಯನ್ ಜನ ವೀಕ್ಷಿಸಿದ್ದಾರೆ ಎಂದು ವರದಿಯಾಗಿದೆ.





