ಹೇಮಗಿರಿ ಕೋಆಪರೇಟಿವ್ ಸೊಸೈಟಿ ಹಗರಣ: ಸಿಐಡಿ ತನಿಖೆಗೆ ವಹಿಸಲಾಗಿದೆ; ಹೈಕೋರ್ಟ್ ಗೆ ಸರಕಾರ ಮಾಹಿತಿ

ಬೆಂಗಳೂರು, ಜೂ.25: ಹೇಮಗಿರಿ ಮಲ್ಟಿ ಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದ ನಾಲ್ಕು ಕೇಸುಗಳನ್ನು ತನಿಖೆ ನಡೆಸಲು ಸಿಐಡಿಗೆ ವಹಿಸಿದ್ದೇವೆ ಎಂದು ರಾಜ್ಯ ಸರಕಾರ ಹೈಕೋರ್ಟ್‍ಗೆ ಮಾಹಿತಿ ನೀಡಿದೆ.
ಸೊಸೈಟಿಯ ಅವ್ಯವಹಾರ ತನಿಖೆ ಕೋರಿ ಠೇವಣಿದಾರರಾದ ಲಕ್ಕಪ್ಪಖಾನ ಗೌಡರ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠಕ್ಕೆ ಸರಕಾರದ ಪರ ವಕೀಲರು ಈ ಮಾಹಿತಿ ನೀಡಿದರು.
ಪ್ರಕರಣಕ್ಕೆ ಸಂಬಂಧಿಸಿದ ನಾಲ್ಕು ಕೇಸುಗಳ ತನಿಖೆಯನ್ನು ಸಿಐಡಿಗೆ ವಹಿಸಿ, ಆದೇಶ ಹೊರಡಿಸಲಾಗಿದೆ. ಸೊಸೈಟಿಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ವಿವರಿಸಿ, ಆ ಸಂಬಂಧಿತ ಆದೇಶದ ಪ್ರತಿಯನ್ನು ಪೀಠಕ್ಕೆ ಸಲ್ಲಿಸಿದರು.
ಜೊತೆಗೆ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖಾ ವರದಿಯನ್ನೂ ಸಲ್ಲಿಸಿದರು. ವರದಿಗಳನ್ನು ಪರಿಶೀಲಿಸಿದ ಪೀಠ, ಪ್ರಕರಣಗಳನ್ನು ತನಿಖೆ ಮಾಡುತ್ತಿರುವ ಅಧಿಕಾರಿ ಕೂಡಲೇ ತಲೆ ಮರೆಸಿಕೊಂಡಿರುವ 6 ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳಬೇಕು, ತನಿಖಾ ಪ್ರಗತಿ ವರದಿಯನ್ನು ಆ.6ರೊಳಗೆ ಸಲ್ಲಿಸಬೇಕೆಂದು ಸೂಚಿಸಿತು.
ಹಾಗೆಯೇ, ಸೊಸೈಟಿಯಲ್ಲಿ ದೊಡ್ಡ ಸಂಖ್ಯೆಯ ಹೂಡಿಕೆದಾರು ಇರುವುದನ್ನು ಗಮನದಲ್ಲಿ ಇಟ್ಟುಕೊಂಡು ಸಕ್ಷಮ ಪ್ರಾಧಿಕಾರವು ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯ್ದೆಯ ಅನ್ವಯ ಕ್ರಮಗಳನ್ನು ಜರುಗಿಸಬೇಕು ಎಂದು ನಿರ್ದೇಶಿಸಿತು.







