ಶನಿವಾರ ಗಾಂಜಾ, ಅಫೀಮು ಸೇರಿ 50 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳ ನಾಶ
ಗೃಹ ಸಚಿವ ಬೊಮ್ಮಾಯಿ ಮಾಹಿತಿ

ಬೆಂಗಳೂರು, ಜೂ. 25: `ಕಳೆದ ವರ್ಷ ರಾಜ್ಯದಲ್ಲಿ ವಶಪಡಿಸಿಕೊಳ್ಳಲಾಗಿರುವ 50 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ವಿವಿಧ ಪ್ರಕಾರದ ಮಾದಕ ದ್ರವ್ಯಗಳನ್ನು ಶನಿವಾರ ನಾಶ ಪಡಿಸಲಾಗುವುದು' ಎಂದು ಗೃಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ್ ಬೊಮ್ಮಾಯಿ ಇಂದಿಲ್ಲಿ ಮಾಹಿತಿ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಅಂತರರಾಷ್ಟ್ರೀಯ ಡ್ರಗ್ ವಿರೋಧಿ ಮತ್ತು ಅಕ್ರಮ ಕಳ್ಳಸಾಗಣೆ ದಿನದ ಅಂಗವಾಗಿ ನ್ಯಾಯಾಲಯದ ಆದೇಶದ ಮೇರೆಗೆ ಡ್ರಗ್ಸ್ ನಾಶ ಮಾಡಲಾಗುವುದು. ಗಾಂಜಾ, ಅಫೀಮು, ಬ್ರೌನ್ ಶುಗರ್, ಹೆರಾಯಿನ್, ಚರಸ್, ಕೊಕೆನ್ ಸೇರಿದಂತೆ ಒಟ್ಟು ಹನ್ನೆರಡು ಪ್ರಕಾರದ 50.23 ಕೋಟಿ ರೂ.ಮೊತ್ತದ ಮಾದಕ ವಸ್ತುಗಳನ್ನು ನಾಶ ಪಡಿಸಲಾಗುವುದು' ಎಂದು ಹೇಳಿದರು.
`ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಶಪಡಿಸಿಕೊಳ್ಳಲಾಗಿರುವ ಮಾದಕ ವಸ್ತುಗಳನ್ನು ನಾಶ ಪಡಿಸಲಾಗುವುದು. 2020ನೆ ಸಾಲಿನಲ್ಲಿ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಒಟ್ಟು 4,066 ಪ್ರಕರಣಗಳನ್ನು ದಾಖಲಿಸಿ ಕೊಂಡು, 5291 ಜನರನ್ನು ಬಂಧಿಸಲಾಗಿದೆ. ದೇಶದಲ್ಲಿ ಮೊಟ್ಟ ಮೊದಲ ಬಾರಿ ಎನ್‍ಡಿಪಿಸಿ ಕಾಯಿದೆ (ಪ್ರಿವೆನ್ಶನ್ ಆಫ್ ಇಲ್ಲಿಸಿಟ್ ಟ್ರಾಫಿಕಿಂಗ್ ನಾರ್ಕೋಟಿಕ್ ಡ್ರಗ್ಸ್ ಸೈಕ್ಯಾಟ್ರಿಕ್ ಸಬಸ್ಟನ್ಸ್) ಅಡಿ ಡ್ರಗ್ಸ್ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಕಾಯಿದೆ ಅಡಿ ಪ್ರಕರಣ ದಾಖಲಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಇದು ಒಂದು ರೀತಿ ಗೂಂಡಾ ಕಾಯಿದೆ ಇದ್ದಂತೆ. ಬೇಗ ಜಾಮೀನು ಸಿಗುವುದಿಲ್ಲ. ವಿದೇಶಿಗರು ಸೇರಿದಂತೆ ಹಲವರನ್ನು ಈ ಕಾಯಿದೆ ಅಡಿ ಬಂಧಿಸಲಾಗಿದೆ' ಎಂದು ಅವರು ವಿವರ ನೀಡಿದರು.
ಎನ್‍ಡಿಪಿಎಸ್ ಕಾಯಿದೆಯನ್ನು ಮತ್ತಷ್ಟು ಬಿಗಿ ಗೊಳಿಸಲಾಗುವುದು. ಇದಕ್ಕಾಗಿ ನ್ಯಾಷನಲ್ ಲಾ ಸ್ಕೂಲ್ ಜತೆ ಮಾತುಕತೆ ನಡೆಯುತ್ತಿದೆ. ಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಈ ಕಾಯಿದೆಗೆ ನಿಯಮಗಳನ್ನು ರೂಪಿಸಲಾಗುವುದು. ಸೆಲೆಬ್ರಿಟಿಗಳ ಡ್ರಗ್ ಪ್ರಕರಣದ ತನಿಖೆ ಮುಗಿದಿದೆ. ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲಾಗುವುದು' ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದರು.
ಇದು ಕೋವಿಡ್ ಸೋಂಕಿನ ಸಂದರ್ಭ. ವಿಧಾನ ಮಂಡಲ ಅಧಿವೇಶನ ಬೇಡ ಎಂದು ವಿಷಯ ಸಮಿತಿ ಸ್ಪೀಕರ್ ಗೆ ವರದಿ ಸಲ್ಲಿಸಿದೆ. ಇದೀಗ ಕೋವಿಡ್ ಡೆಲ್ಟಾ, ಡೆಲ್ಟಾ ಪ್ಲಸ್ ವೈರಸ್ ಪತ್ತೆ ಆಗುತ್ತಿದೆ. ಈಗಿನ ಕೋವಿಡ್ ಸ್ಥಿತಿ ನೋಡಿಕೊಂಡು ಸಿಎಂ ಮತ್ತು ಸಚಿವ ಸಂಪುಟ ಸಹೋದ್ಯೋಗಿಗಳ ಜತೆ ಚರ್ಚೆ ಮಾಡಿ ವಿಧಾನ ಮಂಡಲ ಅಧಿವೇಶನ ಕರೆಯುವ ಬಗ್ಗೆ ನಿರ್ಧಾರ ಮಾಡಲಾಗುವುದು'
-ಬಸವರಾಜ ಬೊಮ್ಮಾಯಿ, ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ







