ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಪೂರ್ಣ ಅನ್‍ಲಾಕ್ ಇಲ್ಲ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

ಬೆಂಗಳೂರು, ಜೂ.25: ಕೋವಿಡ್ ಅನ್‍ಲಾಕ್ ಪ್ರಕ್ರಿಯೆಯನ್ನು ಹಂತ, ಹಂತವಾಗಿ ಜಾರಿಗೊಳಿಸಲಾಗುತ್ತದೆಯೇ ವಿನಃ ಒಂದೇ ಬಾರಿ ಎಲ್ಲವನ್ನು ಸಂಪೂರ್ಣವಾಗಿ ಅನ್‍ಲಾಕ್ ಮಾಡುವುದಿಲ್ಲವೆಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದುವೆ ಸಮಾರಂಭಗಳು ಸೇರಿದಂತೆ ಜನಸಂದಣಿ ಹೆಚ್ಚಾಗುವ ಕಾರ್ಯಕ್ರಮಗಳಿಗೆ ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿರುತ್ತದೆ. ಹೀಗಾಗಿ ಜನತೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದಕ್ಕೆ ಹೆಚ್ಚಿನ ಆದ್ಯತೆ ವಹಿಸಬೇಕೆಂದು ಮನವಿ ಮಾಡಿದ್ದಾರೆ.
ಡೆಲ್ಟಾ ಪ್ಲಸ್ ಸಂಬಂಧಿಸಿದಂತೆ ನಗರದಲ್ಲಿ ವೈರಾಣು ಅನುಕ್ರಮಣಿಕೆ ಪರೀಕ್ಷೆಗೆ ಒತ್ತು ನೀಡಲಾಗುತ್ತಿದೆ. ಸೋಂಕಿತ ವ್ಯಕ್ತಿಯಲ್ಲಿರುವ ರೂಪಾಂತರ ವೈರಾಣುವಿನ ವಂಶವಾಹಿ ಪತ್ತೆ ಮಾಡಲಾಗುತ್ತಿದೆ. ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ಸೋಂಕಿನ ಗುಣಲಕ್ಷಣಗಳು, ದುಷ್ಪರಿಣಾಮಗಳ ಕುರಿತು ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ. ಅವರು ನೀಡುವ ಶಿಫಾರಸುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದೆಂದು ಅವರು ಹೇಳಿದ್ದಾರೆ.
ಡೆಲ್ಟಾ ಪ್ಲಸ್ ವೈರಾಣು ಸೋಂಕಿನ ಅಪಾಯ, ಗುಣಲಕ್ಷಣಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಅಧ್ಯಯನ ನಡೆಸುತ್ತಿದೆ. ಬಿಬಿಎಂಪಿಯಿಂದ ನಿತ್ಯ ಎಂಟು ಮಂದಿ ಸೋಂಕಿತರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.







