ಮಸಗಲಿ ಅರಣ್ಯ ಸಂತ್ರಸ್ತರ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಕಿರುಕುಳ: ಆರೋಪ
ವೈಜ್ಞಾನಿಕ ಪರಿಹಾರ ಪ್ಯಾಕೆಜ್‍ಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ

ಚಿಕ್ಕಮಗಳೂರು, ಜೂ.25: ತಾಲೂಕಿನ ಅರಣ್ಯ ವ್ಯಾಪ್ತಿಯಲ್ಲಿರುವ 7 ಗ್ರಾಮಗಳ 211 ನಿರಾಶ್ರಿತರ ಕುಟುಂಬಗಳಿಗೆ ವೈಜ್ಞಾನಿಕವಾಗಿ ಪರಿಹಾರ ನೀಡದೇ ತರಾತುರಿಯಲ್ಲಿ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಮುಂದಾಗಿದೆ. ಒಕ್ಕಲೆಬ್ಬಿಸುವ ಸಂಚಿನ ಭಾಗವಾಗಿ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಪದೇಪದೇ ಅರಣ್ಯ ವ್ಯಾಪ್ತಿಯಲ್ಲಿ ಕೃಷಿಕರ ಜಮೀನುಗಳಲ್ಲಿ ಬೆಳೆದ ಕಾಫಿ ಗಡಿಗಳನ್ನು ಕಡಿದು ಹಾಕುತ್ತಾ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಶುಕ್ರವಾರ ಮಸಗಲಿ ಅರಣ್ಯ ವ್ಯಾಪ್ತಿಯ ಸಂತ್ರಸ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಅರಣ್ಯ ಇಲಾಖೆ ಸಿಬ್ಬಂದಿ ಕಡಿದು ಹಾಕಿದ್ದ ಕಾಫಿಗಿಡಗಳೊಂದಿಗೆ ಆಗಮಿಸಿದ್ದ ಸಂತ್ರಸ್ತರು ಕೆಲ ಹೊತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಸಗಲಿ ಅರಣ್ಯಕ್ಕೆ ಸಂಬಂಧಿಸಿದಂತೆ ಇಲಾಖಾಧಿಕಾರಿಗಳು ಅವೈಜ್ಞಾನಿಕ ಸಮೀಕ್ಷೆ ನಡೆಸಿದ್ದು, ಅವೈಜ್ಞಾನಿಕವಾಗಿಯೇ ಪರಿಹಾರ ನೀಡಿ ತರಾತುರಿಯಲ್ಲಿ ಒಕ್ಕಲೆಬ್ಬಿಸಲು ಸಂಚು ಮಾಡುತ್ತಾ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದರು. ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ ಸಂತ್ರಸ್ತರ ಅಳಲು ಆಲಿಸಬೇಕೆಂದು ಆಗ್ರಹಿಸಿದರು.
ಕೆಲ ಹೊತ್ತಿನ ಬಳಿಕ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆಗಮಿಸಿ ಸಂತ್ರಸ್ತರ ದೂರು ಆಲಿಸಿದರು. ಈ ವೇಳೆ ಜಿಲ್ಲಾಧಿಕಾರಿ ಬಳಿ ಅಳಲು ತೋಡಿಕೊಂಡ ಸಂತ್ರಸ್ತರು, ಚಿಕ್ಕಮಗಳೂರು ತಾಲೂಕಿನ ಮಸಗಲಿ ಅರಣ್ಯ ವ್ಯಾಪ್ತಿಯಲ್ಲಿರುವ ಆವತಿ ಹಾಗೂ ಜಾಗರ ಹೋಬಳಿಯ 7 ಗ್ರಾಮಗಳ ಸುಮಾರು 211 ಕುಟುಂಬದವರು ಅನಾದಿ ಕಾಲದಿಂದಲೂ ಮನೆ, ಜಮೀನು ಮಾಡಿಕೊಂಡು ಕೃಷಿಯಲ್ಲಿ ತೊಡಗಿದ್ದಾರೆ. ಕಂದಾಯ ಜಮೀನು ಎಂಬ ಕಾರಣಕ್ಕೆ ಜಮೀನು ಕೃಷಿ ಮಾಡಿದ್ದೇವೆ. ಕೆಲ ವರ್ಷಗಳ ಹಿಂದೆ ಈ ಗ್ರಾಮಗಳು ಅರಣ್ಯ ವ್ಯಾಪ್ತಿಗೆ ಸೇರಿದ್ದು, ನ್ಯಾಯಾಲಯದ ಆದೇಶ ಎಂದು ಹೇಳಿಕೊಂಡು ನಿವಾಸಿಗಳನ್ನು ಒಕ್ಕಲೆಬ್ಬಿಸಲು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಮುಂದಾಗಿದೆ. ಆದರೆ ಇದೇ ಅರಣ್ಯ ವ್ಯಾಪ್ತಿಯಲ್ಲಿನ 102 ಪ್ರಕರಣಗಳಲ್ಲಿ 44 ಕುಟುಂಬಗಳಿಗೆ 1002 ಎಕರೆ ಭೂಮಿಯನ್ನು ಉಳಿಸಿಕೊಡಲಾಗಿದೆ. ಆದರೆ ಸಂತ್ರಸ್ತರೆಂದು ಗುರುತಿಸಿರುವ 211 ಕುಟುಂಬಗಳು ಇರುವ 375 ಎಕರೆ ಭೂಮಿಯನ್ನು ಖುಲ್ಲಾ ಮಾಡಿಸಲು ಇಲಾಖೆ ಮುಂದಾಗಿದ್ದು, ಸಂತ್ರಸ್ತರಿಗೆ ಪ್ಯಾಕೆಜ್ ಘೋಷಣೆಯಾಗಿದ್ದು, ಒಕ್ಕಲೇಳುವಂತೆ ಕಿರುಕುಳ ನೀಡಲಾಗುತ್ತಿದೆ ಎಂದರು.
ಮಸಗಲಿ ಅರಣ್ಯ ವ್ಯಾಪ್ತಿಯಲ್ಲಿ ಕೇವಲ ಮನೆ ಕಳೆದುಕೊಳ್ಳುವ 16 ಕುಟುಂಬಗಳನ್ನು ಗುರುತಿಸಿರುವ ಅರಣ್ಯ ಇಲಾಖೆ, ಈ ಸಂತ್ರಸ್ತರಿಗೆ ಇಂದಾವರ ಗ್ರಾಮದಲ್ಲಿ 4 ಗುಂಟೆ ಜಾಗ ಹಾಗೂ ಮನೆ ನಿರ್ಮಾಣಕ್ಕೆ 2.50 ಲಕ್ಷ ರೂ. ಅನುದಾನ, 5 ಲಕ್ಷ ರೂ. ಪರಿಹಾರ ಹಾಗೂ ಸಾಗಣೆ ವೆಚ್ಚ 25 ಸಾವಿರ ರೂ. ಘೋಷಣೆ ಮಾಡಲಾಗಿದೆ. ಆದರೆ ಇದೇ ಮಸಗಲಿ ವ್ಯಾಪ್ತಿಯಲ್ಲಿ ಜಮೀನು ಮತ್ತು ಮನೆ ಕಳೆದುಕೊಳ್ಳುವ 23 ಕುಟುಂಬಗಳನ್ನು ಗುರುತಿಸಿದ್ದು, ಮನೆಯೊಂದಿಗೆ 1-10 ಎಕರೆ ಜಮೀನು ಕಳೆದುಕೊಳ್ಳುವ ಈ ಸಂತ್ರಸ್ತರಿಗೂ ಅದೇ ಪರಿಹಾರದ ಪ್ಯಾಕೆಜ್ ಅನ್ನು ಘೋಷಣೆ ಮಾಡಲಾಗಿದ್ದು, 10-20 ಎಕರೆ ಜಮೀನು ಕಳೆದುಕೊಳ್ಳುವವರಿಗೂ ಒಂದೇ ಮಾದರಿಯ ಪ್ಯಾಕೆಜ್ ನಿಗದಿ ಮಾಡಲಾಗಿದೆ. ಇಂತಹ ತಾರತಮ್ಯದ ಅವೈಜ್ಞಾನಿಕ ಪರಿಹಾರವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಂತ್ರಸ್ತರು ಅವಲತ್ತುಕೊಂಡರು.
ಸಂತ್ರಸ್ತರಾಗುವ 211 ಕುಟುಂಬಗಳ ಪೈಕಿ 76 ಕುಟುಂಬಗಳನ್ನು ಮಾತ್ರ ಇಲಾಖಾಧಿಕಾರಿಗಳು ಪರಿಹಾರಕ್ಕೆ ಪ್ಯಾಕೆಜ್‍ಗೆ ಪರಿಗಣಿಸಿದ್ದಾರೆ. ಇನ್ನುಳಿದ 135 ಕುಟುಂಬಗಳನ್ನು ಯಾವುದೇ ಪರಿಹಾರ ನೀಡುತ್ತಿಲ್ಲ ಎಂದು ದೂರಿದ ಸಂತ್ರಸ್ತರು, ಮಸಗಲಿ ಅರಣ್ಯ ವ್ಯಾಪ್ತಿಯಲ್ಲಿ ವಾಸವಿರುವ ಇನ್ನೂ ನೂರಾರು ಕುಟುಂಬಗಳ ಸಮೀಕ್ಷೆಯಿಂದ ಹೊರ ಉಳಿದಿದ್ದು, ಸಮೀಕ್ಷೆಯನ್ನು ಹೊಸದಾಗಿ ನಡೆಸಿ ಮನೆ, ಜಮೀನು ಕಳೆದುಕೊಳ್ಳುವವರಿಗೆ ಒಂದೇ ರೀತಿಯ ಪರಿಹಾರ ನೀಡದೇ ಜಮೀನು, ಕೃಷಿ, ಮನೆಗಳ ಮೌಲ್ಯ ಇವುಗಳ ಆಧಾರದ ಮೇಲೆ ಎಲ್ಲರಿಗೂ ಸೂಕ್ತ ಪರಿಹಾರ ನೀಡಬೇಕು. ಈ ಸಂಬಂಧ ಸರಕಾರ ಅಧಿಕಾರಿಗಳು ಮತ್ತು ಸಂತ್ರಸ್ತರ ಸಭೆ ನಡೆಸಿ ಚರ್ಚಿಸಬೇಕು. ಸೂಕ್ತ ಪರಿಹಾರ ಘೋಷಣೆಯಾಗದ ಹೊರತು ಅರಣ್ಯ ಇಲಾಖೆಯವರು ಜಮೀನು ನಾಶ ಮಾಡದಂತೆ ಸೂಚನೆ ನೀಡಬೇಕೆಂದು ಜಿಲ್ಲಾಧಿಕಾರಿ ಬಳಿ ಮನವಿ ಮಾಡಿದರು.
ಸಂತ್ರಸ್ತರ ದೂರು ಆಲಿಸಿದ ಜಿಲ್ಲಾಧಿಕಾರಿ, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಮಸಗಲಿ ಅರಣ್ಯ ಭೂಮಿ ನಿರಾಶ್ರಿತರ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ್, ಮುಖಂಡರು, ಸಂತ್ರಸ್ತರೂ ಆದ ಕವೀಶ್, ಶಿವಣ್ಣ, ಯೋಗೀಶ್, ಕುಮಾರ್, ಪೃಥ್ವಿ, ಮೋಹನ್‍ಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡ ರಸೂಲ್‍ಖಾನ್ ಮತ್ತಿತರರು ಉಪಸ್ಥಿತರಿದ್ದರು.








