ಚಾಮರಾಜನಗರ ದುರಂತ: ಸಂತ್ರಸ್ತ ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ನೌಕರಿ ನೀಡಲು ಎಸ್‍ಡಿಪಿಐ ಆಗ್ರಹ
ಬೆಂಗಳೂರು, ಜೂ.25: ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ಕೋವಿಡ್ ಸಾವು ಪ್ರಕರಣ ಸಂಬಂಧ ಸಂತ್ರಸ್ತ ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ನೌಕರಿ ಹಾಗೂ ಪ್ರಕರಣದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ತಲಾ 50 ಲಕ್ಷ ರೂ.ಪರಿಹಾರ ಕೊಡಬೇಕೆಂದು ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ಅಬ್ರಾರ್ ಆಹಮದ್ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೇ 2ರ ರಾತ್ರಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ಕೊರತೆಯಿಂದ ನಡೆದ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಪ್ರತಿಭಟನೆ ನಡೆಸಿ ಒತ್ತಾಯಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾ.ವೇಣುಗೋಪಾಲ್ ತಮ್ಮ ಪ್ರಾಥಮಿಕ ತನಿಖಾ ವರದಿಯಲ್ಲಿ ಘಟನೆಗೆ ಆಕ್ಸಿಜನ್ ಕೊರತೆಯೇ ಪ್ರಮುಖ ಕಾರಣವಾಗಿದ್ದು, ಈ ಘಟನೆಯಲ್ಲಿ 36 ಮಂದಿ ಮೃತರಾಗಿರುತ್ತಾರೆ ಎಂದು ತಿಳಿಸಿದ್ದಾರೆಂದು ಮಾಹಿತಿ ನೀಡಿದರು.
ಜಿಲ್ಲಾಸ್ಪತ್ರೆಗೆ ಚಾಮರಾಜನಗರ ಜಿಲ್ಲಾಧಿಕಾರಿಗಳ ಕಾರ್ಯ ವೈಖರಿ ಕುರಿತು ಸಂದರ್ಭಕ್ಕೆ ತಕ್ಕಂತೆ ನಾಯಕತ್ವ ಮತ್ತು ಕ್ರಿಯಾಶೀಲತೆ ತೋರಿಸುವಲ್ಲಿ ಜಿಲ್ಲಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ವರದಿಯಲ್ಲಿ ಒತ್ತಿ ಹೇಳಲಾಗಿದೆ. ಇಷ್ಟಾಗಿದ್ದರೂ ಇಲ್ಲಿಯವರೆಗೂ ಒಬ್ಬನೇ ಒಬ್ಬ ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡಿಲ್ಲ. ಕ್ರಮ ಇರಲಿ ನೈತಿಕ ಹೊಣೆ ಹೊತ್ತು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ರಾಜೀನಾಮೆಯೂ ನೀಡಿಲ್ಲವೆಂದು ಅವರು ಟೀಕಿಸಿದರು.
ಸರಕಾರ ಪ್ರಕರಣದ 24 ಸಂತ್ರಸ್ತರಿಗೆ ಮಾತ್ರ ಸರಕಾರ ತಲಾ 2 ಲಕ್ಷ ರೂ.ಪರಿಹಾರ ನೀಡಿ ಮೌನಕ್ಕೆ ಶರಣಾಗಿದೆ. ಸರಕಾರದ ಈ ನಿರ್ಲಕ್ಷ್ಯ, ಜನವಿರೋಧಿ ನೀತಿಯನ್ನು ಖಂಡಿಸಿ ಎಸ್‍ಡಿಪಿಐ ನಿರಂತವಾಗಿ ಪ್ರತಿಭಟನೆ ನಡೆಸಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.







