Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಐತಿಹಾಸಿಕ ಎನ್‌ಟಿಎಂ ಶಾಲೆ ಉಳಿಯಲಿ

ಐತಿಹಾಸಿಕ ಎನ್‌ಟಿಎಂ ಶಾಲೆ ಉಳಿಯಲಿ

ಡಾ. ಬಿ. ಪಿ. ಮಹೇಶ ಚಂದ್ರ ಗುರುಡಾ. ಬಿ. ಪಿ. ಮಹೇಶ ಚಂದ್ರ ಗುರು25 Jun 2021 11:09 PM IST
share
ಐತಿಹಾಸಿಕ ಎನ್‌ಟಿಎಂ ಶಾಲೆ ಉಳಿಯಲಿ

ಮೈಸೂರಿನ ಮಹಾರಾಜ 10ನೇ ಚಾಮರಾಜ ಒಡೆಯರ ಆಳ್ವಿಕೆ ಸಮಯದಲ್ಲಿ 1890ನೇ ಇಸವಿಯಲ್ಲಿ ವೀರ ಸಂತ ವಿವೇಕಾನಂದರು ಮೈಸೂರಿಗೆ ನೀಡಿದ್ದ ಭೇಟಿ ಐತಿಹಾಸಿಕವಾದುದು. ವಾಸ್ತವವಾಗಿ ಅವರು ಚಿಕಾಗೋ ಧಾರ್ಮಿಕ ಸಮ್ಮೇಳನಕ್ಕೆ ಭಾರತದ ಪ್ರತಿನಿಧಿಯಾಗಿ ತೆರಳುವ ಸಲುವಾಗಿ ಮಹಾರಾಜರಿಂದ ಆರ್ಥಿಕ ನೆರವು ಯಾಚಿಸಿದರು. ಅಂದು ಶ್ರೇಷ್ಠ ಸಂತರು ಮತ್ತು ಸಾಧಕರಿಗೆ ರಾಜಾಶ್ರಯ ಭಾರತದ ಎಲ್ಲೆಡೆ ಲಭಿಸಿತ್ತು. ಮೈಸೂರಿನ ರಾಜಮನೆತನ ಅನೇಕ ಜ್ಞಾನಿಗಳು ಮತ್ತು ಅನುಭಾವಿಗಳಿಗೆ ಎಲ್ಲ ರೀತಿಯಲ್ಲೂ ಪ್ರೋತ್ಸಾಹಿಸಿದ ಉದಾಹರಣೆಗಳು ಬಹಳಷ್ಟಿವೆ. ವಿವೇಕಾನಂದರು ಮೈಸೂರಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಆಗಿನ ದಿವಾನ್ ಶೇಷಾದ್ರಿ ಅಯ್ಯರ್ ಭವನದಲ್ಲಿ ತಂಗಿದ್ದು ಎನ್‌ಟಿಎಂ ಶಾಲೆಯ ಪಕ್ಕದಲ್ಲಿರುವ ನಿರಂಜನ ಮಠ ಮತ್ತು ಸದ್ವಿದ್ಯಾ ಶಾಲೆಗಳಲ್ಲಿ ಉಪನ್ಯಾಸಗಳನ್ನು ಮಾಡಿರುವುದಕ್ಕೆ ಐತಿಹಾಸಿಕ ದಾಖಲೆಗಳಿವೆ. ಮೈಸೂರು ನಗರ ಹಲವಾರು ಪಾರಂಪರಿಕ ಕಟ್ಟಡಗಳನ್ನು ಹೊಂದಿದ್ದು ಪ್ರತಿ ವರ್ಷ ಲಕ್ಷಾಂತರ ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿಶೇಷವಾಗಿ ಐತಿಹಾಸಿಕ ಮೈಸೂರು ದಸರಾ ಸಂದರ್ಭದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಟ್ಟು ಮೈಸೂರಿನ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗಿದ್ದಾರೆ.

ಸುಮಾರು 140 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಯನ್ನು ತೆರೆಯಬೇಕೆಂದು ಚಾಮರಾಜ ಒಡೆಯರಿಗೆ ಅತ್ಯಂತ ಕಳಕಳಿಯಿಂದ ಮನವಿ ಮಾಡಿದ್ದರು. ಇವರ ಮಾನವೀಯ ಕಳಕಳಿಯಿಂದ ಪ್ರಭಾವಿತರಾದ ಮಹಾರಾಣಿ ವಾಣಿವಿಲಾಸ ಅಮ್ಮಣ್ಣಿಯವರು ತಮ್ಮ ಮುಂದಾಲೋಚನೆಯಿಂದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೈಸೂರು ನಗರದಲ್ಲಿ ಮರಿಮಲ್ಲಪ್ಪಕಾಲೇಜಿಗೆ ಹೊಂದಿಕೊಂಡಂತಿರುವ ಸ್ಥಳದಲ್ಲಿ ಎನ್‌ಟಿಎಂ ಶಾಲೆಯನ್ನು ಆರಂಭಿಸಿದರು. ಇದು ಭಾರತ ದೇಶದಲ್ಲಿ ಹೆಣ್ಣುಮಕ್ಕಳ ಪ್ರಪ್ರಥಮ ಶಾಲೆಯೆಂಬ ಹೆಗ್ಗಳಿಕೆಯನ್ನು ಹೊಂದಿದೆ. ಇಂತಹ ಐತಿಹಾಸಿಕ ಶಾಲೆಯನ್ನು ಉಳಿಸಿಕೊಳ್ಳುವುದು ಮೈಸೂರು ನಗರದ ಪ್ರಜ್ಞಾವಂತರ ಬಹುದೊಡ್ಡ ಸಾಮಾಜಿಕ ಜವಾಬ್ದಾರಿಯಾಗಿದೆ. 1970ರ ದಶಕದಲ್ಲಿ ಕರ್ನಾಟಕ ರಾಜ್ಯ ಸರಕಾರ ಮೈಸೂರು ನಗರದ ಕೇಂದ್ರ ಭಾಗದಲ್ಲಿರುವ ಯಾದವಗಿರಿಯಲ್ಲಿ ಸುಮಾರು 60 ಎಕರೆಯಷ್ಟು ಕೋಟ್ಯಂತರ ರೂ. ಬೆಲೆ ಬಾಳುವ ಅಮೂಲ್ಯ ಭೂಮಿಯನ್ನು ರಾಮಕೃಷ್ಣ ಆಶ್ರಮದ ಸಾಂಸ್ಕೃತಿಕ-ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಮಂಜೂರು ಮಾಡಿತ್ತು. ಸುಮಾರು 2-3 ಎಕರೆ ಪ್ರದೇಶದಲ್ಲಿ ಧ್ಯಾನಕೇಂದ್ರ, ಗ್ರಂಥಾಲಯ, ಸಭಾಂಗಣ ಮೊದಲಾದ ಸೌಕರ್ಯಗಳನ್ನು ಒದಗಿಸಲಾಗಿದೆ. ಸುಮಾರು 57 ಎಕರೆಯಷ್ಟು ಅಮೂಲ್ಯ ಭೂಮಿ ಖಾಲಿ ಬಿದ್ದಿದ್ದು ಸರಕಾರದ ನೆರವು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿಲ್ಲದಿರುವ ಹಿನ್ನೆಲೆಯಲ್ಲಿ ವಿವೇಕಾನಂದ ಸ್ಮಾರಕವನ್ನು ಅಲ್ಲಿಯೇ ನಿರ್ಮಿಸುವುದು ಸೂಕ್ತವಾಗಿದೆ.

ಇತ್ತೀಚೆಗೆ ಮೈಸೂರಿನ ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳು ಐತಿಹಾಸಿಕ ಎನ್‌ಟಿಎಂ ಶಾಲೆಯ ಆವರಣದಲ್ಲೇ ಸ್ವಾಮಿ ವಿವೇಕಾನಂದರ ಸ್ಮಾರಕವನ್ನು ನಿರ್ಮಿಸಬೇಕೆಂದು ಪಟ್ಟು ಹಿಡಿದಿರುವುದು ಇತಿಹಾಸ ಮತ್ತು ಲಿಂಗ ಸಮಾನತೆಗಳಿಗೆ ಬಗೆದಿರುವ ಅಪಚಾರವೇ ಆಗಿದೆ. ಎನ್‌ಟಿಎಂ ಶಾಲೆಯನ್ನು ಆರಂಭಿಸಲು ವಿವೇಕಾನಂದರು ಪ್ರೇರಣೆ ನೀಡಿದರೇ ಹೊರತು ಶಾಲೆಯ ಆವರಣದಲ್ಲಿ ಎಂದಿಗೂ ತಂಗಿರಲಿಲ್ಲ. ಅವರು ಉಳಿದುಕೊಂಡಿದ್ದ ದಿವಾನ್ ಶೇಷಾದ್ರಿ ಅಯ್ಯರ್ ಭವನ ಹಾಗೂ ನಿರಂಜನ ಮಠಗಳೊಂದಿಗೆ ಎನ್‌ಟಿಎಂ ಶಾಲೆ ಯಾವುದೇ ವಿಧದ ಸಂಬಂಧ ಹೊಂದಿಲ್ಲ. ಆದಾಗ್ಯೂ ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳು ಶಾಲೆಯ ಆವರಣದಲ್ಲೇ ವಿವೇಕಾನಂದರ ಸ್ಮಾರಕ ನಿರ್ಮಿಸಿ ಶಾಲೆಯನ್ನು ಬೇರೊಂದು ಸಮೀಪದ ಸರಕಾರಿ ಶಾಲೆಯೊಂದಿಗೆ ವಿಲೀನಗೊಳಿಸಬೇಕೆಂದು ಪಟ್ಟು ಹಿಡಿದಿರುವುದು ಅರ್ಥಹೀನವಾಗಿದೆ.

ಕಳೆದ ವರ್ಷ ಮೈಸೂರಿನ 106 ಮಂದಿ ಪ್ರಗತಿಪರ ಚಿಂತಕರು ಮತ್ತು ಎನ್‌ಟಿಎಂ ಶಾಲೆಯ ಹಿತೈಷಿಗಳು ಯಾವುದೇ ಕಾರಣಕ್ಕೂ ಪಟ್ಟಭದ್ರ ಹಿತಾಸಕ್ತಿಗಳ ಒತ್ತಾಯದಿಂದಾಗಿ ಎನ್‌ಟಿಎಂ ಶಾಲೆಯನ್ನು ಮುಚ್ಚಬಾರದೆಂದು ಸತ್ಯಾಗ್ರಹ ನಡೆಸಿ ಕರ್ನಾಟಕ ರಾಜ್ಯ ಸರಕಾರದ ಗಮನ ಸೆಳೆದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಎನ್‌ಟಿಎಂ ಶಾಲೆ ತಳ ಸಮುದಾಯಗಳ ಜ್ಞಾನ ದಾಸೋಹ ಕೇಂದ್ರವಾಗಿರುವ ಹಿನ್ನೆಲೆಯಲ್ಲಿ ಅಲ್ಲಿಯೇ ಮುಂದುವರಿಯಲಿ, ಸ್ವಾಮಿ ವಿವೇಕಾನಂದರ ಸ್ಮಾರಕ ಶಾಲೆಯ ಆವರಣದಲ್ಲೇ ನಿರ್ಮಾಣವಾಗಲೆಂಬ ತೀರ್ಮಾನಕ್ಕೆ ಬಂದರು. ಆದಾಗ್ಯೂ ಮೇಲ್ಕಂಡ ಐತಿಹಾಸಿಕ-ಸಾಂಸ್ಕೃತಿಕ ವಿಚಾರಗಳಿಗೆ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲದ ಎನ್‌ಟಿಎಂ ಶಾಲೆಯ ಆವರಣದಲ್ಲೇ ವಿವೇಕಾನಂದ ಸ್ಮಾರಕ ನಿರ್ಮಿಸಲು ರಾಮಕೃಷ್ಣ ಆಶ್ರಮದವರು ಒತ್ತಾಯಿಸುತ್ತಿರುವುದು ಅರ್ಥಹೀನ ಸಂಗತಿಯಾಗಿದೆ.

ಈ ಪ್ರಕರಣ ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ವಿಚಾರಣೆಗೆ ಒಳಗಾಗಿದ್ದು ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣವಾಗಬೇಕೆಂಬ ನಿಲುವನ್ನು ಹೊಂದಿರುವುದು ನೈಜ ಇತಿಹಾಸ ಮತ್ತು ಸಾಂವಿಧಾನಿಕ ಲಿಂಗ ಸಮಾನತೆ ಆಶಯಗಳಿಗೆ ವಿರುದ್ಧವಾಗಿದೆ. ಇಂತಹ ಅಪ್ರಸ್ತುತ ತೀರ್ಮಾನವನ್ನು ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರ ನಮಗಿದೆ. ಇತ್ತೀಚೆಗೆ ಮೈಸೂರಿನ ಜಿಲ್ಲಾಧಿಕಾರಿಗಳು ಕರ್ನಾಟಕ ರಾಜ್ಯ ಸರಕಾರಕ್ಕೆ ಪತ್ರ ಬರೆದು ಎನ್‌ಟಿಎಂ ಶಾಲೆ ಹಾಗೂ ಸ್ವಾಮಿ ವಿವೇಕಾನಂದ ಸ್ಮಾರಕ ಒಟ್ಟಿಗೆ ಇರುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲವೆಂದು ತಿಳಿಸಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಗೌರವಾನ್ವಿತ ಮುಖ್ಯಮಂತ್ರಿಗಳು ಈ ವಿಚಾರವನ್ನು ಸಂಪುಟ ಸಭೆಯಲ್ಲಿ ಚರ್ಚಿಸಿ ಕರ್ನಾಟಕ ಉಚ್ಚನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಶಾಲೆಯನ್ನು ಉಳಿಸುವುದು ಅತ್ಯಂತ ಸೂಕ್ತ ಕ್ರಮವಾಗಿದೆ.

ರಾಮಕೃಷ್ಣ ಆಶ್ರಮದವರಿಗೆ ವಿವೇಕಾನಂದರ ಸ್ಮಾರಕ, ಶಾಪಿಂಗ್‌ಮಾಲ್, ವಾಣಿಜ್ಯ ಸಂಕೀರ್ಣ ಮೊದಲಾದವುಗಳನ್ನು ನಿರ್ಮಿಸಿ ಆರ್ಥಿಕವಾಗಿ ಲಾಭ ಗಳಿಸಬೇಕೆಂಬ ಧೋರಣೆ ಇರುವುದು ಖಂಡನೀಯ. ಐತಿಹಾಸಿಕ ಬಾಲಕಿಯರ ಶಾಲೆಯನ್ನು ವಿಸರ್ಜಿಸಿ ವಿವೇಕಾನಂದರ ಸ್ಮಾರಕ ನಿರ್ಮಿಸಬೇಕೆಂದು ಇವರ ಜೊತೆಗೂಡಿ ಮೈಸೂರು ನಗರದ ಕೆಲವು ಸ್ಥಾಪಿತ ಹಿತಾಸಕ್ತಿಗಳು ವಾದಿಸುತ್ತಿರುವುದು ಅರ್ಥಹೀನ. ಆಶ್ರಮದ ಉಸ್ತುವಾರಿ ವಹಿಸಿರುವ ಧಾರ್ಮಿಕ ಮುಖಂಡರಿಗೆ ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ ಎಂಬ ಸತ್ಯದರ್ಶನ ಆಗಿಲ್ಲದಿರುವುದು ಬಹುದೊಡ್ಡ ವಿಪರ್ಯಾಸವಾಗಿದೆ. ಅಂದು ಆಶ್ರಮದ ಸ್ವಾಮೀಜಿಗಳೇ ಬರೆದಿರುವ ಪುಸ್ತಕದಲ್ಲಿ ಬಡವರಿಗಾಗಿ ಶಾಲೆಯನ್ನು ತೆರೆಯಬೇಕೆಂದು ವಿವೇಕಾನಂದರು ಪತ್ರ ಬರೆದಿರುವುದು ನೆನಪಾಗುತ್ತಿಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ.

ಶ್ರೀ ರಾಮಕೃಷ್ಣ ಆಶ್ರಮದವರು ಶಾಲೆಯನ್ನು ಉಳಿಸಿ ಸ್ಮಾರಕ ನಿರ್ಮಿಸಲು ಮುಂದಾಗಲಿ ಎಂಬುದು ಪ್ರಜ್ಞಾವಂತರ ನ್ಯಾಯೋಚಿತ ಆಶಯವಾಗಿದೆ. ಬಡಹೆಣ್ಣುಮಕ್ಕಳ ಶಾಲೆಯನ್ನು ನಾಶಗೊಳಿಸಿ ಸ್ಮಾರಕ ನಿರ್ಮಿಸುವ ಯೋಜನೆಗೆ ಸ್ವಾಮಿ ವಿವೇಕಾನಂದರ ಆತ್ಮ ಖಂಡಿತ ಸಮ್ಮತಿ ನೀಡುವುದಿಲ್ಲ. ಎನ್‌ಟಿಎಂ ಶಾಲೆ ಉಳಿಯಲಿ ಎಂಬ ನ್ಯಾಯೋಚಿತ ಬೇಡಿಕೆಗೆ ಸರಕಾರ ಮತ್ತು ಆಶ್ರಮದವರು ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ಶ್ರೀ ರಾಮಕೃಷ್ಣ ಆಶ್ರಮದ ಆವರಣದಲ್ಲಿ ಸದ್ಬಳಕೆಯಾಗದೇ ಉಳಿದಿರುವ ಸುಮಾರು 57 ಎಕರೆ ಭೂಮಿಯನ್ನು ಸರಕಾರ ಹಿಂಪಡೆಯಲಿ ಎಂದು ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡುವುದು ಅನಿವಾರ್ಯವಾಗಬಹುದು. ದೀನ ದುರ್ಬಲ ವರ್ಗಗಳಿಗೆ ಸೇರಿದ ಬಾಲಕಿಯರ ಶಾಲೆಯ ಗೋರಿಯ ಮೇಲೆ ವಿವೇಕಾನಂದರ ಭವ್ಯ ಸ್ಮಾರಕ ನಿರ್ಮಿಸಿ ವಾಣಿಜ್ಯ ಉದ್ದೇಶಗಳನ್ನು ಅಧ್ಯಾತ್ಮದ ಹೆಸರಿನಲ್ಲಿ ಈಡೇರಿಸುವ ಪ್ರಯತ್ನಗಳನ್ನು ಕಾನೂನುಬದ್ಧವಾಗಿ ನಿಷ್ಕ್ರಿಯಗೊಳಿಸಲು ಮೈಸೂರು ನಗರದ ಪ್ರಜ್ಞಾವಂತರು ಬದ್ಧರಾಗಿದ್ದಾರೆ.

share
ಡಾ. ಬಿ. ಪಿ. ಮಹೇಶ ಚಂದ್ರ ಗುರು
ಡಾ. ಬಿ. ಪಿ. ಮಹೇಶ ಚಂದ್ರ ಗುರು
Next Story
X