ಕಂಟೆಂಟ್ ಉಲ್ಲಂಘನೆ: ಟ್ವಿಟರ್ ನಿಂದ ವರುಣ್ ಗಾಂಧಿಗೆ ನೋಟಿಸ್

ಹೊಸದಿಲ್ಲಿ,ಜೂ.25: ಬಿಜೆಪಿ ಸಂಸದ ವರುಣ್ ಗಾಂಧಿಯವರಿಗೆ ಟ್ವಿಟರ್ ಕಂಟೆಂಟ್ ಉಲ್ಲಂಘನೆ ನೋಟಿಸನ್ನು ಜಾರಿಗೊಳಿಸಿದೆ. ಸ್ಥಳೀಯ ಕಾನೂನುಗಳ ವಿರುದ್ಧ ವಿಷಯವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಭಾರತದ ಕಾನೂನು ಜಾರಿ ಏಜೆನ್ಸಿಗಳು ಕಳುಹಿಸಿರುವ ಕಾನೂನು ನೋಟಿಸನ್ನು ಬಹಿರಂಗಗೊಳಿಸುವಂತೆ ಗಾಂಧಿ ಗುರುವಾರ ಟ್ವಿಟರ್ ಗೆ ಆಗ್ರಹಿಸಿದ್ದರು.
ಟ್ವಿಟರ್ ನಿಂದ ತನಗೆ ಬಂದಿರುವ ನೋಟಿಸ್ ನ ಸ್ಕ್ರೀನ್ ಶಾಟ್ ಅನ್ನು ಗಾಂಧಿ ಪೋಸ್ಟ್ ಮಾಡಿದ್ದು, ಅವರ ಟೈಮ್ಲೈನ್ ನಲ್ಲಿಯ ಕೆಲವು ವಿಷಯಗಳು ಭಾರತೀಯ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಅದರಲ್ಲಿ ಹೇಳಲಾಗಿದೆ.
‘ಟ್ವಿಟರ್ ಮುಕ್ತ ಅಭಿವ್ಯಕ್ತಿಯನ್ನು ಪ್ರತಿಪಾದಿಸುತ್ತದೆ,ಆದರೆ ಅದನ್ನು ಕೃತಿಗಿಳಿಸುವಲ್ಲಿ ವಿಫಲಗೊಳ್ಳುತ್ತದೆ. ನಾನು ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ ಎನ್ನುವುದು ನನಗೆ ಖಚಿತವಿದೆ ಮತ್ತು ಯಾವುದೇ ಕಾನೂನು ಜಾರಿ ಏಜೆನ್ಸಿಯು ನನ್ನ ಟ್ವೀಟ್ ಗಳಲ್ಲಿ ತಪ್ಪುಗಳನ್ನು ಹುಡುಕಲು ಸಾಧ್ಯವಿಲ್ಲ. ಈ ನೋಟಿಸಿಗೆ ಆಧಾರವೇನು ಎನ್ನುವುದನ್ನು ಟ್ವಿಟರ್ ಸ್ಪಷ್ಟಪಡಿಸಬೇಕು. ಅದರ ವರ್ತನೆ ಆಘಾತವನ್ನುಂಟು ಮಾಡಿದೆ ’ಎಂದು ಗಾಂಧಿ ಬರೆದಿದ್ದಾರೆ.





