‘ಒಕ್ಕೂಟ ಸರಕಾರ’ವೇ ಸರಿ
ಮಾನ್ಯರೇ,
ತಮಿಳುನಾಡು ಕೇಂದ್ರ ಸರಕಾರವನ್ನು ಇನ್ನು ಮುಂದೆ ಒಕ್ಕೂಟ ಸರಕಾರ ಎಂದೇ ಕರೆಯಲಿದೆಯೆಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ತಮಿಳುನಾಡು ಸಿಎಂ ಸ್ಟಾಲಿನ್ ಅವರ ಈ ಪ್ರಬುದ್ಧ ನಡೆ ಕಾನೂನಾತ್ಮಕವಾಗಿ ಸರಿಯಿದೆ. ಸಂವಿಧಾನವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಭಾಗ (1) ಅನುಚ್ಛೇದ (1)ರಲ್ಲಿ ಹೇಳಿರುವಂತೆ ಇಂಡಿಯಾ ಅಂದರೆ ಭಾರತವು ರಾಜ್ಯಗಳ ಒಂದು ಒಕ್ಕೂಟವಾಗಿರತಕ್ಕದ್ದು ಎಂದು ಸ್ಪಷ್ಟವಾಗಿದೆ. ಹೀಗಾಗಿ ಒಕ್ಕೂಟ ಸರಕಾರ ಎನ್ನುವುದೇ ಸೂಕ್ತ. ಇಲ್ಲಿ ರಾಜ್ಯ ಮತ್ತು ಕೇಂದ್ರದ ನಡುವೆ ಅಧಿಕಾರ ವಿಂಗಡಣೆಯಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಕೇಂದ್ರ ಸರಕಾರವು ರಾಜ್ಯ ಸರಕಾರಗಳ ಮೇಲೆ ಅಧಿಕಾರ ಚಲಾಯಿಸುವ ಹಕ್ಕನ್ನು ಪಡೆಯುತ್ತದೆ ಹೊರತು ಪ್ರಮುಖವಾದಂತಹ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ ಯಾವುದಕ್ಕೂ ಸಂವಿಧಾನ ಪರಮೋಚ್ಚ ಅಧಿಕಾರ ಕೊಟ್ಟಿಲ್ಲ. ಅಂಬೇಡ್ಕರ್ ಸಂವಿಧಾನ ರಚನೆ ಮಾಡುವಾಗ 395 ವಿಧಿ ಮತ್ತು 22 ಭಾಗಗಳಲ್ಲಿ ಎಲ್ಲೂ ಕೇಂದ್ರ ಮತ್ತು ಕೇಂದ್ರ ಸರಕಾರಗಳು ಎಂಬ ಪದ ಬಳಕೆ ಮಾಡಿಲ್ಲ. ಒಕ್ಕೂಟ ಹಾಗೂ ಒಕ್ಕೂಟ ಸರಕಾರಗಳು ಎನ್ನುವ ಪದ ಬಳಕೆ ಮಾಡಿದ್ದಾರೆ..! ಇತ್ತೀಚೆಗೆ ತಮಿಳುನಾಡಿನಲ್ಲಿ ಹಿಂದಿ ಭಾಷಾ ಹೇರಿಕೆ ವಿರುದ್ಧ ದೊಡ್ಡ ಮಟ್ಟದಲ್ಲಿ ವಿರೋಧದ ಕೂಗು ಕೇಳಿಬಂದಿತ್ತು. ಈಗ ಒಕ್ಕೂಟ ಸರಕಾರದ ಬಗ್ಗೆ ತನ್ನ ನಿಲುವು ವ್ಯಕ್ತಪಡಿಸುವ ಮೂಲಕ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಮೋದಿ ಸರಕಾರಕ್ಕೆ ಸಂವಿಧಾನದ ಪಾಠ ತಿಳಿಸಿ ಹೇಳಿ ಸರಿಯಾಗಿ ಬಿಸಿ ಮುಟ್ಟಿಸಿದೆ. ಸೈದ್ಧಾಂತಿಕ ಹೋರಾಟಗಾರ ಪೆರಿಯಾರ್‌ರಿಂದ ಸ್ಫೂರ್ತಿ ಪಡೆದ ತಮಿಳುನಾಡಿನ ಈ ನಡೆ ಎಲ್ಲ ರಾಜ್ಯಗಳಿಗೂ ಮಾದರಿಯಾಗಲಿ.





