ಯುಎಇಯಲ್ಲಿ ಅಕ್ಟೋಬರ್ 17 ರಂದು ಟ್ವೆಂಟಿ-20 ವಿಶ್ವಕಪ್ ಆರಂಭ, ನವೆಂಬರ್ 14 ರಂದು ಫೈನಲ್: ವರದಿ

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್ ಪಂದ್ಯ ಕೊನೆಗೊಂಡ ಎರಡು ದಿನಗಳ ನಂತರ ಯುಎಇಯಲ್ಲಿ 2021 ರ ಪುರುಷರ ಟ್ವೆಂಟಿ- 20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 17 ರಿಂದ ಆರಂಭವಾಗಲಿದೆ ಎಂದು ವರದಿಯಾಗಿದೆ.
ESPN cricinfo ದಲ್ಲಿ ಬಂದಿರುವ ವರದಿಯ ಪ್ರಕಾರ, ಟ್ವೆಂಟಿ- 20 ವಿಶ್ವಕಪ್‌ನ ಫೈನಲ್ ಪಂದ್ಯವನ್ನು ನವೆಂಬರ್ 14 ರಂದು ನಿಗದಿಪಡಿಸಲಾಗಿದೆ.
ಪುನಾರಂಭವಾಗಲಿರುವ ಐಪಿಎಲ್ ನ ಮೊದಲ ಪಂದ್ಯವು ಸೆಪ್ಟಂಬರ್ 19ರಂದು ನಡೆಯಲಿದೆ ಹಾಗೂ ಫೈನಲ್ ಪಂದ್ಯವು ಅಕ್ಟೋಬರ್ 15 ರಂದು ನಡೆಯಲಿದೆ ಎಂದು ANI ಈ ಹಿಂದೆ ವರದಿ ಮಾಡಿತ್ತು. ಬಯೋ ಬಬಲ್ ನಲ್ಲಿ ಹಲವಾರು ಕೋವಿಡ್ -19 ಪ್ರಕರಣಗಳು ವರದಿಯಾದ ನಂತರ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಅನ್ನು ಮೇ ಮೊದಲ ವಾರದಲ್ಲಿ ಸ್ಥಗಿತಗೊಳಿಸಲಾಗಿತ್ತು.
ಮುಂಬರುವ ಟ್ವೆಂಟಿ- 20 ವಿಶ್ವಕಪ್ 16 ತಂಡಗಳ ಪಂದ್ಯಾವಳಿಯಾಗಲಿದೆ. ಈ ಟೂರ್ನಿಯನ್ನು ಭಾರತದಲ್ಲಿ ಆಡಲು ನಿರ್ಧರಿಸಲಾಗಿತ್ತು. ಆದರೆ ಪಂದ್ಯಾವಳಿಯನ್ನು ಯುಎಇಗೆ ವರ್ಗಾಯಿಸುವ ಬಗ್ಗೆ ಚರ್ಚೆಗಳು ನಡೆದಿವೆ.
ವರದಿಯ ಪ್ರಕಾರ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇನ್ನೂ ಅಂತರ್ ರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಅಧಿಕೃತವಾಗಿ ಪತ್ರ ಬರೆದಿಲ್ಲ.
"ಈ ತಿಂಗಳ ಕೊನೆಯಲ್ಲಿ ಆತಿಥೇಯ ರಾಷ್ಟ್ರದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಟೂರ್ನಿ ಎಲ್ಲಿ ಆಡಿದರೂ ಬಿಸಿಸಿಐ ಟೂರ್ನಿಯ ಆತಿಥೇಯ ಕ್ರಿಕೆಟ್ ಮಂಡಳಿಯಾಗಿ ಉಳಿಯುತ್ತದೆ ಎಂದು ಮಂಡಳಿಯು ದೃಢ ಪಡಿಸಿದೆ" ಎಂದು ಐಸಿಸಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.







