ಶಕ್ತಿಕೇಂದ್ರದ ಆವರಣದಲ್ಲಿ ಬಸವಣ್ಣನ ಪುತ್ಥಳಿ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿ: ಸಿಎಂ ಯಡಿಯೂರಪ್ಪ ಪತ್ರ

ಬೆಂಗಳೂರು, ಜೂ.25: ಈಗಾಗಲೇ ವಿಧಾನಸೌಧದ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಮುಂಭಾಗದಲ್ಲಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿಆರ್ ಅಂಬೇಡ್ಕರ್ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ. ಇದೀಗ `ಸಮಾಜ ಸುಧಾರಕ ಜಗಜ್ಯೋತಿ ಬಸವಣ್ಣನವರ ಪುತ್ಥಳಿ ಸ್ಥಾಪಿಸಲು ಸೂಕ್ತ ಪ್ರಸ್ತಾವನೆಯೊಂದಿಗೆ ಕಡತವನ್ನು ಮಂಡಿಸಿ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾರೆ.
ಜೂ.9ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಯಡಿಯೂರಪ್ಪ, `ಹನ್ನೆರಡನೆ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದ ಸಮಾನತೆಯ ಹರಿಕಾರ ಜಗಜ್ಯೋತಿ ಬಸವಣ್ಣನವರ ಪುತ್ಥಳಿಯನ್ನು ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದ ಆವರಣದಲ್ಲಿ ನಿರ್ಮಿಸುವುದರಿಂದ ಪ್ರಜಾಪ್ರಭತ್ವ ವ್ಯವಸ್ಥೆಗೆ ಮುಖಪ್ರಾಯವಾಗುತ್ತದೆ' ಎಂದು ಪತ್ರದಲ್ಲಿ ನಿರ್ದೇಶನ ನೀಡಿದ್ದಾರೆ.
Next Story





