ಲಸಿಕೆಗಳನ್ನು ಮಿಶ್ರಣಗೊಳಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಬಹುದು: ಏಮ್ಸ್ ವರಿಷ್ಠ

ಹೊಸದಿಲ್ಲಿ, ಜೂ. 26: ಕೋವಿಡ್ ಲಸಿಕೆಗಳನ್ನು ಸಂಯೋಜಿಸುವುದರಿಂದ ಉತ್ತಮ ರೋಗ ನಿರೋಧಕ ಶಕ್ತಿ ಅಥವಾ ಪ್ರತಿಕಾಯಗಳು ಉತ್ಪತ್ತಿಯಾಗುವ ಖಚಿತ ಸಾಧ್ಯತೆ ಇದೆ ಎಂದು ಕೆಲವು ದತ್ತಾಂಶಗಳು ತಿಳಿಸಿವೆ. ಆದರೆ, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹೆಚ್ಚಿನ ಮಾಹಿತಿಯ ಅಗತ್ಯತೆ ಇದೆ ಎಂದು ಏಮ್ಸ್ ನ ವರಿಷ್ಠ ಡಾ. ರಣದೀಪ್ ಗುಲೇರಿಯಾ ಶನಿವಾರ ತಿಳಿಸಿದ್ದಾರೆ.
ಮೊದಲು ಒಂದು ಲಸಿಕೆ, ಬಳಿಕ ಇನ್ನೊಂದು ಲಸಿಕೆ ನೀಡಿರುವುದು ನಾವು ಈ ಹಿಂದೆ ಗಮನಿಸಿದ ವಿಷಯ. ಲಸಿಕೆಗಳನ್ನು ಸಂಯೋಜಿಸುವುದರಿಂದ ಸ್ಪಲ್ಪ ಹೆಚ್ಚೇ ಅಡ್ಡ ಪರಿಣಾಮಗಳು ಉಂಟಾಗಬಹುದು ಎಂದು ಕೆಲವು ದತ್ತಾಂಶಗಳು ಸೂಚಿಸಿವೆ. ಆದರೆ, ಉತ್ತಮ ರೋಗ ನಿರೋಧಕ ಶಕ್ತಿಗೆ ಹಾಗೂ ಪ್ರತಿಕಾಯಗಳ ಉತ್ಪತ್ತಿಗೆ ಕಾರಣವಾಗಬಹುದು ಇತರ ದತ್ತಾಂಶಗಳು ಹೇಳಿವೆ ಎಂದು ಡಾ. ಗುಲೆರಿಯಾ ತಿಳಿಸಿದ್ದಾರೆ.
‘‘ಒಬ್ಬರಿಗೆ ಲಸಿಕೆಯ ಸಂಯೋಜನೆ ನೀಡುವುದನ್ನು ನಿರ್ಧರಿಸಲು ಹೆಚ್ಚು ದತ್ತಾಂಶಗಳು ಬೇಕಾಗಬಹುದು. ಯಾಕೆಂದರೆ ಭವಿಷ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಲಸಿಕೆಗಳು ಲಭ್ಯವಿರಲಿದೆ. ಪೈಝರ್, ಮೊಡೆರ್ನಾ, ಸ್ಪುಟ್ನಿಕ್ ವಿ ಹಾಗೂ ಝೈಡಸ್ ಕ್ಯಾಡಿಲ್ಲಾ ಲಸಿಕೆಗಳು ಲಭ್ಯವಿರಲಿದೆ. ಆದುದರಿಂದ ಯಾವ ಸಂಯೋಜನೆ ಉತ್ತಮ ಎಂಬುದು ನಮಗೆ ಈಗ ತಿಳಿದಿಲ್ಲ. ಆದರೆ, ಇದು ಒಂದು ಆಯ್ಕೆ ಎಂಬುದನ್ನು ಪ್ರಾಥಮಿಕ ಅಧ್ಯಯನ ತಿಳಿಸಿದೆ.’’ ಎಂದು ಅವರು ವಿವರಿಸಿದ್ದಾರೆ.
ಈ ದಿಶೆಯಲ್ಲಿ ಸರಕಾರ ಕಾರ್ಯ ನಿರ್ವಹಿಸುತ್ತಿದೆ. ಟ್ರಯಲ್ ನ ಫಲಿತಾಂಶ ಕೆಲವು ತಿಂಗಳುಗಳಲ್ಲಿ ದೊರೆಯಲಿದೆ. ಬ್ರಿಟೀಷ್ ಅಧ್ಯಯನದ ಪ್ರಾಥಮಿಕ ಫಲಿತಾಂಶವನ್ನು ಲಾನ್ಸೆಟ್ನಲ್ಲಿ ಕಳೆದ ತಿಂಗಳು ಪ್ರಕಟಿಸಲಾಗಿತ್ತು. ಎರಡು ಲಸಿಕೆಗಳ ಸಂಯೋಜನೆ ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬುದು ಬೆಳಕಿಗೆ ಬಂದಿದೆ ಎಂಬ ಸ್ಪಾನಿಷ್ ಅಧ್ಯಯನದ ಬಗ್ಗೆ ರಾಯ್ಟರ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈಗಿರುವ ಲಸಿಕೆಗಳು ಡೆಲ್ಟಾ ಪ್ಲಸ್ ಪ್ರಬೇಧದ ವಿರುದ್ಧ ಪರಿಣಾಮಕಾರಿಯಾಗದೇ ಇರಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸಿರುವ ಡಾ. ಗುಲೇರಿಯಾ ಅವರು, ಈ ಎಲ್ಲ ಆತಂಕಗಳ ಹೊರತಾಗಿಯೂ ಲಸಿಕೆ ಹಾಕಿಸಿಕೊಳ್ಳುವುದು ಅತಿ ಮುಖ್ಯ ಎಂದು ಒತ್ತಿ ಹೇಳಿದ್ದಾರೆ.
‘‘ನೀವು ಎರಡು ಡೋಸ್ ಲಸಿಕೆಗಳನ್ನು ಹಾಕಿಸಿಕೊಂಡ ಬಳಿಕ ಕೊರೋನ ಸೋಂಕಿಗೆ ಒಳಗಾಗಬಹುದು. ಆದರೆ, ಸೋಂಕಿನ ತೀವ್ರತೆ ತುಂಬಾ ಕಡಿಮೆ ಇರುತ್ತದೆ’’ ಎಂದು ಗುಲೇರಿಯಾ ಹೇಳಿದ್ದಾರೆ. ಡೆಲ್ಟಾ ಪ್ರಬೇಧಕ್ಕೆ ಒಂದು ಡೋಸ್ ಲಸಿಕೆ ಸಾಕಾಗಲಾರದು ಎಂದು ಅವರು ಹೇಳಿದ್ದಾರೆ. ಪ್ರಕಟಿತ ವೈದ್ಯಕೀಯ ಸಂಶೋಧನೆಗೆಳು ಒಂದು ಡೋಸ್ ಶೇ. 33ರಷ್ಟು ಹಾಗೂ ಎರಡು ಡೋಸ್ ಶೇ. 90ರಷ್ಟು ರಕ್ಷಣೆ ನೀಡುತ್ತದೆ ಎಂದು ಅದು ಹೇಳಿದೆ ಎಂದು ತಿಳಿಸಿದ್ದಾರೆ.







