ತೇಜಸ್ವಿ ನನ್ನ ಕಿರಿಯ ಸಹೋದರನಂತೆ: ಆರ್ ಜೆಡಿಯೊಂದಿಗೆ ಮೈತ್ರಿ ಸುಳಿವು ನೀಡಿದ ಚಿರಾಗ್ ಪಾಸ್ವಾನ್

ಹೊಸದಿಲ್ಲಿ: ಮಿತ್ರಪಕ್ಷ ಬಿಜೆಪಿ ಬಿಹಾರ ರಾಜಕೀಯ ಬೆಳವಣಿಗೆಗಳ ಬಗ್ಗೆ ಮೌನವಾಗಿದ್ದರೂ ತಮ್ಮ ಪಕ್ಷದೊಳಗಿನ ಬಂಡಾಯಯೊಂದಿಗೆ ಹೋರಾಡುತ್ತಿರುವ ಲೋಕ ಜನ ಶಕ್ತಿ (ಎಲ್‌ಜೆಪಿ) ನಾಯಕ ಚಿರಾಗ್ ಪಾಸ್ವಾನ್ ಅವರು ಭವಿಷ್ಯದಲ್ಲಿ ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯ ಬಗ್ಗೆ ಶನಿವಾರ ಸುಳಿವು ನೀಡಿದ್ದಾರೆ.
"ನನ್ನ ತಂದೆ ಹಾಗೂ ಲಾಲು ಜಿ ಯಾವಾಗಲೂ ಆಪ್ತರಾಗಿದ್ದರು. ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಹಾಗೂ ನಾನು ಬಾಲ್ಯದಿಂದಲೂ ಒಬ್ಬರಿಗೊಬ್ಬರು ಅರಿತುಕೊಂಡಿದ್ದೇವೆ. ನಾವು ನಿಕಟ ಸ್ನೇಹವನ್ನು ಹೊಂದಿದ್ದೇವೆ. ಅವರು ನನ್ನ ಕಿರಿಯ ಸಹೋದರ. ಬಿಹಾರದಲ್ಲಿ ಚುನಾವಣಾ ಸಮಯ ಬಂದಾಗ ಪಕ್ಷವು ಮೈತ್ರಿ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ" ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಚಿರಾಗ್ ಪಾಸ್ವಾನ್ ಅವರ ಲೋಕ ಜನ ಶಕ್ತಿ ಕೇಂದ್ರದಲ್ಲಿ ಎನ್‌ಡಿಎಯ ಭಾಗವಾಗಿದೆ. ಆದರೆ ಬಿಹಾರದಲ್ಲಿ ಅಧಿಕಾರದಲ್ಲಿರುವ ಜೆಡಿಯು -ಬಿಜೆಪಿ ಸರಕಾರದ ಭಾಗವಾಗಿಲ್ಲ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಚಿರಾಗ್, ಜೆಡಿಯು ಜೊತೆಗಿನ "ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ" ಕಾರಣದಿಂದ ಮೈತ್ರಿಯಿಂದ ಹೊರನಡೆದರು ಹಾಗೂ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡಿದರು. ಎಲ್ಲ ರ್ಯಾಲಿಯಲ್ಲಿ ಚಿರಾಗ್ ಪಾಸ್ವಾನ್ಅ ವರು ಬಿಹಾರದ ಮತದಾರರನ್ನು ನಿತೀಶ್ ಕುಮಾರ್ ಅವರಿಗೆ ಮತ ಚಲಾಯಿಸದಂತೆ ಕೇಳುತ್ತಲೇ ಇದ್ದರು.
ತಮ್ಮ ಪಕ್ಷವು ಬಿಹಾರ ವಿಧಾನಸಭೆಯಲ್ಲಿ ಕೇವಲ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾದ ನಂತರ, "ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ಒದಗಿಸುವುದು ಹಾಗೂ ಜೆಡಿಯುಗೆ ಹಾನಿ ಮಾಡುವುದು ನನ್ನ ಉದ್ದೇಶವಾಗಿತ್ತು. 2025 ರಲ್ಲಿ ಎಲ್ ಜೆಪಿ ತನ್ನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ" ಎಂದು ಪಾಸ್ವಾನ್ ಹೇಳಿದ್ದಾರೆ.







