ಕೋಲ್ಕತ್ತಾ ನಕಲಿ ಲಸಿಕೀಕರಣ ಜಾಲ: ಪ್ರಧಾನ ಆರೋಪಿ ವಿರುದ್ಧ ಹತ್ಯೆ ಯತ್ನದ ಪ್ರಕರಣ ದಾಖಲಿಸುವ ಸಾಧ್ಯತೆ

ಕೋಲ್ಕತಾ, ಜೂ. 26: ಕೋಲ್ಕತ್ತಾದ ನಕಲಿ ಕೋವಿಡ್ ಲಸಿಕೀಕರಣ ಜಾಲದ ಪ್ರಧಾನ ಆರೋಪಿ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ ಕಲಂ 307ರ ಅಡಿಯಲ್ಲಿ ಹತ್ಯೆ ಯತ್ನದ ಆರೋಪ ದಾಖಲಿಸುವ ಸಾಧ್ಯತೆ ಇದೆ. ನಕಲಿ ಲಸಿಕೀಕರಣ ಜಾಲದ ಪ್ರಧಾನ ಆರೋಪಿ ದೇಬಾಂಜನ್ ದೇವ್ನ ನನ್ನು ಕೋಲ್ಕತಾ ಪೊಲೀಸರು ಶುಕ್ರವಾರ ಬಂಧಿಸಿದ್ದರು.
ತೃಣಮೂಲ ಕಾಂಗ್ರೆಸ್ ನಾಯಕಿ ಮಿಮಿ ಚಕ್ರವರ್ತಿ ಅವರು ಪ್ರಕರಣ ದಾಖಲಿಸಿದ ಬಳಿಕ ಐಎಎಸ್ ಅಧಿಕಾರಿಯಂತೆ ಸೋಗು ಹಾಕಿದ್ದ ದೇಬಾಂಜನ್ ದೇವ್ನನ್ನು ಬಂಧಿಸಲಾಯಿತು. ಕೋಲ್ಕತ್ತಾದಲ್ಲಿ ನಡೆದ ನಕಲಿ ಕೋವಿಡ್ ಲಸಿಕೀಕರಣದ ಶಿಬಿರಕ್ಕೆ ಸಂಬಂಧಿಸಿ ಶನಿವಾರ ಬೆಳಗ್ಗೆ ದೇವ್ನ ಇನ್ನೂ ಮೂವರು ಸಹವರ್ತಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ದೇವ್ ನ ಸಹವರ್ತಿಗಳಲ್ಲಿ ಇಬ್ಬರು ಕೋಲ್ಕತಾ ನಗರಾಡಳಿತದ ಹೆಸರಿನಲ್ಲಿ ರೂಪಿಸಿದ ಬ್ಯಾಂಕ್ ಖಾತೆಗೆ ಸಹಿ ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ. ದೇವ್ ವೇತನದಾರರ ಪಟ್ಟಿಯಲ್ಲಿರುವ ಮೂರನೇ ವ್ಯಕ್ತಿ ಹಲವು ಜನರು ವಿಷಕಾರಿ ಲಸಿಕೆಯನ್ನು ಹಾಕಿಸಿಕೊಂಡ ಕ್ಯಾಂಪ್ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ. ಮೂವರಲ್ಲಿ ಓರ್ವ ಸಾಲ್ಟ್ಲೇಕ್ನ ನಿವಾಸಿ. ಇನ್ನೋರ್ವ ಬರಸಾತ್ನ ನಿವಾಸಿ. ಇಬ್ಬರನ್ನೂ ಬಂಧನದ ಬಳಿಕ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







