‘‘ನಾನಿದನ್ನು ನಿರೀಕ್ಷಿಸಿರಲಿಲ್ಲ ವಿಜಯ್’’
ಪ್ರತಿಕ್ರಿಯೆ

ಲೇಖಕ ಬಿ.ಚಂದ್ರೇ ಗೌಡರ ಜೊತೆ ‘ಅವ್ಯಕ್ತ’ ಸಿನೆಮಾ ನಿರ್ದೇಶಿಸಿದ್ದ ಡಾ. ಸಾಸ್ವೆಹಳ್ಳಿ ಜೊತೆ ಸಂಚಾರಿ ವಿಜಯ್
ನನ್ನ ಮಗನ ವಯಸ್ಸಿನ ವಿಜಯ್ ತೀರಿಕೊಂಡಾಗ ತಂತಾನೇ ಹರಿಯುವ ಕಣ್ಣೀರನ್ನು ತಡೆಯಲು ಒಂದು ಲೇಖನ ಬರೆದು ಸಮಾಧಾನ ತಂದುಕೊಂಡೆ. ಕಡೆಗೆ ಗೆಳೆಯ ಶ್ರೀನಿವಾಸ್ ಕರಿಯಪ್ಪನವರಿಗೆ ಫೋನ್ ಮಾಡಿ ‘‘ಸಂಚಾರಿ ವಿಜಯ್ ಬಗ್ಗೆ ಒಂದು ಲೇಖನ ಬರೆದಿದ್ದೇನೆ’’ ಎಂದೆ. ‘‘ಕಳುಹಿಸಿಕೊಡಿ’’ ಎಂದರು. ಹಾಗೆಯೇ ಮಾಡಿದೆ. ಅವರು ‘ವಾರ್ತಾಭಾರತಿ’ ಗೆ ಕಳುಹಿಸಿದರು. ಪ್ರಕಟವಾದ ದಿನ ಬೆಳಗ್ಗೆಯೇ ಮೊದಲು ಬಂದ ಫೋನ್ ಬೆಳಗಾವಿಯ ಕತೆಗಾರ ಚೌಗಲೆಯವರದ್ದು. ಅವರೂ ನಾನೂ ಧಾರವಾಡದ ಭಾಷೆಯಲ್ಲೇ ಮಾತನಾಡುವುದು. ‘‘ಭಾಳ ಛಲೋ ಬರದೀರಿ ಗೌಡ್ರ, ನಮ್ಮ ಅರುಣ ಜೋಳದಕೂಡ್ಲಿಗಿ ಕಳಿಸಿಕೊಟ್ಟ. ಪಾಪ ಸಂಚಾರಿ ವಿಜಯ್ ಇರಬೇಕಿತ್ರಿ’’ಎಂದರು. ‘‘ಇರಬೇಕಿತ್ರೀ ಸರ, ನಾವೆಲ್ಲಾ ಅದೀವಿ ಅವ ಹೋಗ್ಬಿಟ್ಟ ನೋಡ್ರಿ’’ ಎಂದು ಅವನ ಬಗ್ಗೆಯೇ ಒಂದು ಗಂಟೆ ಮಾತನಾಡಿದೆವು. ಆನಂತರ ಮಾತು ಮುಗಿಸಿ ನನ್ನ ಫೋನ್ಕಾಲ್ಗಳನ್ನು ಗಮನಿಸಿದರೆ ಇಪ್ಪತ್ತು ಕಾಲ್ಗಳು ಬಂದಿದ್ದವು. ಅವರಿಗೆಲ್ಲ ಉತ್ತರಿಸಿ ಸಾಕಾಗುವಷ್ಟರಲ್ಲಿ ಸಂಜೆಯ ವೇಳೆಗೆ ನಲವತ್ತು ಕಾಲ್ಗಳು ಬಂದವು. ಅದರಲ್ಲಿ ಮೂರು ಕಾಲ್ಗಳು ಮಾತ್ರ ನೀವು ಬರೆದಿರುವುದು ಸುಳ್ಳು. ಉತ್ಪ್ರೇಕ್ಷೆ. ಅಂತಹದ್ದೇನೂ ನಡೆದೇ ಇಲ್ಲ ಎಂದು ವಾದಿಸಿದವು. ಅವರಿಗೆಲ್ಲ ವಿವರವಾದ ಉತ್ತರ ಕೊಡುವುದು ನನ್ನ ಜವಾಬ್ದಾರಿ.
ಸಂಚಾರಿ ವಿಜಯ್ ಶಿವಮೊಗ್ಗದ ‘ಹೊಂಗಿರಣ’ ತಂಡ ತೆಗೆದ ‘ಅವ್ಯಕ್ತ’ ಸಿನೆಮಾದಿಂದ ತೀರಾ ಹತ್ತಿರಕ್ಕೆ ಬಂದವನು. ಇಲ್ಲಿಗೆ ಬಂದ 2-3 ಬಾರಿ ತುಂಬಾ ಆಪ್ತವಾಗಿ ಮಾತನಾಡಿದ್ದ. ನನ್ನ ಲೇಖನಗಳನ್ನು ಓದಿದ್ದ. ಹಾಗೆಯೇ ನನ್ನ ಕಥಾ ಸಂಕಲನವನ್ನು ಓದಿ ಪ್ರತಿ ಕತೆಯನ್ನು ಮೆಚ್ಚಿ ಫೋನ್ ಮಾಡುತ್ತಿದ್ದ. ಆದರೆ ಹಠಾತ್ತನೆ ನಿರ್ಗಮಿಸಿದ. ಆತನ ಬಗ್ಗೆ ಬರೆದ ಲೇಖನ, ಸಾಮಾಜಿಕ ಜಾಲತಾಣಗಳಲ್ಲಿ ಪಡೆದುಕೊಂಡ ವೇಗ ಅಚ್ಚರಿ ಮೂಡಿಸಿತು. ನಮ್ಮ ಎಚ್.ಕೆ. ರಮೇಶ್ ಹೇಳುವಂತೆ ‘‘ನನ್ನ ಮನಸ್ಸಿನಿಂದ ಹೊರಬಿದ್ದ ಅಕ್ಷರದ ಅಳು’’. ಆದ್ದರಿಂದಲೇ ಬಹಳ ಜನರ ಮನಸ್ಸು ತಾಕಿದೆ. ಆ ಲೇಖನದಲ್ಲಿ ಇರುವ ತಪ್ಪುಯಾವುದೆಂದರೆ ಇಡೀ ಪಂಚನಹಳ್ಳಿ ಜನ ಅವರನ್ನು ಅಸ್ಪೃಶ್ಯವಾಗಿ ನಡೆಸಿಕೊಂಡರು ಎಂಬುದು. ನಮ್ಮ ಶ್ರೇಣೀಕೃತ ಸಮಾಜದಲ್ಲಿ ಒಂದು ಊರೆಂದರೆ ಊರಿನ ಅಗತ್ಯ ಪೂರೈಸುವ ಎಲ್ಲಾ ಜಾತಿಗಳೂ ಇರುತ್ತವೆ. ಅಲ್ಲಿ ಅವರದ್ದೇ ಆದ ಕೇರಿಗಳೂ ಇರುತ್ತವೆ. ಈ ಜಾತಿಗಳಲ್ಲಿ ಒಳ್ಳೆಯವರು, ಒಳ್ಳೆಯವರಲ್ಲದವರು ಸಮಾನರಾಗಿರುತ್ತಾರೆ. ಈಚೆಗೆ ಒಳ್ಳೆಯವರಲ್ಲದವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಹಾಗಾಗಿ ಸಾಮಾಜಿಕ ಕ್ಷೋಭೆ ಉಂಟಾಗಿದೆ.
ನಿಮಗೆ ಪಂಚನಹಳ್ಳಿಯೇ ಗೊತ್ತಿಲ್ಲ ಎಂಬುವವರಿಗೆ ನಾನು ಹೇಳುವುದಿಷ್ಟೆ. ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಶಾಸಕರಾಗಿದ್ದ ಓಂಕಾರಮೂರ್ತಿ ಅವರ ಸಂದರ್ಶನ ಮಾಡಲು ಹೋಗಿದ್ದೆ. ಅಲ್ಲದೆ ಅವರೊಬ್ಬ ಗೌರವಾನ್ವಿತ ಶಾಸಕರು ಎಂದು ನಮೂದಿಸಿದ್ದಲ್ಲದೆ, ಇಡೀ ಚಿಕ್ಕಮಗಳೂರು ಜಿಲ್ಲೆಯಲ್ಲೇ ಸಭ್ಯ ರಾಜಕಾರಣಿಯೆಂದು ದಾಖಲಿಸಿದ್ದೆ. ನಮ್ಮ ಎಂ.ಪಿ. ಪ್ರಕಾಶ್ ಮುಖಾಂತರ ಅವರ ಮಗ ಪಿ.ಒ. ಶಿವಕುಮಾರ್ ಗೆಳೆಯರಾಗಿದ್ದರು. ಇಂತಹ ಹಲವು ಗೆಳೆಯರಿದ್ದಾರೆ. ಹಾಗಾಗಿ ಒಂದು ಸಮುದಾಯವೇ ಅಸ್ಪಶ್ಯತೆ ಆಚರಿಸುತ್ತದೆ ಎನ್ನುವುದು ಸರಿಯಾದ ತೀರ್ಮಾನವಲ್ಲ. ‘‘ಪಂಚಮಸಾಲಿಗಳ ಮನೆಯಲ್ಲಿ ನೀವು ಹೇಳುವಂತೆ ಬಸವಣ್ಣನ ಫೋಟೊ ಇರುವುದಿಲ್ಲ’’ ಎಂದು ಕಡೂರಿನ ಪತ್ರಕರ್ತ ಮಿತ್ರರು ಫೋನ್ ಮಾಡಿದರು. ಇದು ಕೂಡ ಅಷ್ಟು ನಿಜವಲ್ಲ. ನನಗೆ ಪರಿಚಯದ ಕೆಲ ರಾಜಕಾರಣಿಗಳ ಮನೆಯಲ್ಲಿ ಬಸವಣ್ಣನ ಫೋಟೊ ಇದೆ. ನನ್ನ ಲೇಖನದಿಂದ ನಾನೊಂದು ಸಮುದಾಯದ ದ್ವೇಷಿ ಎಂಬಂತೆ ಮಾತನಾಡುತ್ತಿರುವವರಿಗೆ ನಾನು ಹೇಳುವುದೇನೆಂದರೆ, ‘‘ನಮ್ಮ ನಡುವೆ ಜಾತಿ ರಾಜಕಾರಣಕ್ಕೆ ಯಾರನ್ನಾದರೂ ದ್ವೇಷ ಮಾಡುವುದು ದುಷ್ಟತನವಾಗುತ್ತದೆ. ಇಂತಹ ದುಷ್ಟತನ ಮನಸ್ಸಿನಲ್ಲಿದ್ದರೆ ಆತ ಸತ್ಯದರ್ಶನದಿಂದ ವಂಚಿತನಾಗುತ್ತಾನೆ’’ ಎಂದು ಲಂಕೇಶರಿಂದ ಗುರುಬೋಧನೆ ಪಡೆದವನು ನಾನು.
ಬಸವಣ್ಣನ ಫೋಟೊ ಪೂಜಿಸುತ್ತ ಅಸ್ಪಶ್ಯತೆ ಆಚರಿಸುವವರು ಎಂದು ದಾಖಲಿಸಿರುವ ನಾನು ದಲಿತರನ್ನು ಮನೆಗೆಲಸ ಮತ್ತು ಅಡುಗೆ ಕೆಲಸಕ್ಕೆ ಇಟ್ಟುಕೊಂಡವರನ್ನೂ ನೋಡಿದ್ದೇನೆ. ಇವರಾರೂ ವಿಜಯ್ನ ಪ್ರಕರಣದ ಹತ್ತಿರಕ್ಕೆ ಬಂದವರಲ್ಲ. ನಿಜಕ್ಕೂ ಅವರು ಬಸವತತ್ವ ಅನುಯಾಯಿಗಳು. ನಾನು ಬರೆದಿರುವುದು ಸುಳ್ಳೇ ಎಂಬುದಕ್ಕೆ ಕವಿ ಜಯದೇವ ಮಾಡಿದ ಫೋನ್ ಹೆಚ್ಚಿನ ಸಾಕ್ಷ್ಯಾಧಾರ ಒದಗಿಸಬಲ್ಲದು. ಜಯದೇವ ಸಂಚಾರಿ ವಿಜಯ್ ತಂದೆಯ ಸಹೋದರ ಸಂಬಂಧಿ. ಅವರು ಫೋನ್ ಮಾಡಿ ‘‘ಚಂದ್ರೇಗೌಡರೇ ನಿಮ್ಮ ಲೇಖನ ಓದಿದೆ. ಬಸವರಾಜಯ್ಯ ನಮ್ಮ ಸಹೋದರ ಸಂಬಂಧಿ. ಅವರನ್ನು ರಾಜಣ್ಣ ಎಂದು ಕರೆಯುತ್ತಿದ್ದೆವು. ಅವರು ಮದುವೆಯಾದ ಸಮಯದಲ್ಲಿ ಗಂಡ ಹೆಂಡತಿ ಇಬ್ಬರೂ ಯಾವುದೋ ಮದುವೆಗೆ ಬಂದು ಬಿಟ್ಟರು. ಜನ ಹೆದರಿದಂತೆ ನೋಡತೊಡಗಿದರು. ಕೆಲವರು ಗದರಿ ‘ಇಲ್ಲೆಲ್ಲ ಬರಬಾರದು ನೀವು’ ಅಂತ ಹೇಳಿ ವಾಪಾಸು ಕಳುಹಿಸಿದರು’’ ಎಂದರು. ಬಹುಶಃ ಈ ಗದರಿಸಿ ಕಳಿಸಿದಂತಹವರೇ ಅವರ ಮಕ್ಕಳಿಗೆ ಅವಮಾನವಾಗುವಂತೆ ನಡೆದುಕೊಂಡಿದ್ದಾರೆ. ಈಗ ಕೆಲವರು ವಿಜಯ್ನ ಅಣ್ಣನಿಂದ ‘‘ನಮಗೆ ಅಂತಹ ಅವಮಾನವೇ ಆಗಿಲ್ಲ’’ ಎಂಬ ಹೇಳಿಕೆ ಕೊಡಿಸುತ್ತಿದ್ದಾರೆ. ಆಗಿಲ್ಲ ಅನ್ನುವುದಾದರೆ ಅದನ್ನು ನಾನು ಗೌರವಿಸುತ್ತೇನೆ.
ಚಿಕ್ಕಮಗಳೂರು ಜಿಲ್ಲೆಯ ಬಯಲು ಪ್ರಾಂತದ ಶಾಲೆಯೊಂದರ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋದ ಮಾಸ್ತರುಗಳು ‘‘ಇಲ್ಲಿ ಎಸ್ಸಿ ಹುಡುಗರು ಕೈಯೆತ್ತಿ’’ ಎಂದರು. ಎತ್ತಿದರು. ‘‘ನೀವೆಲ್ಲ ಈ ಕಡೆ ಬನ್ನಿ’’ ಎಂದರು. ಬಂದರು. ‘‘ಸರಿ ಉಳಿದವರು ದೇವಸ್ಥಾನ ನೋಡಿಕೊಂಡು ಬನ್ನಿ’’ ಎಂದರು. ಈ ಪ್ರಕರಣದ ನಂತರ ಶಾಲೆಗೆ ಹೋಗುವುದನ್ನು ಬಿಟ್ಟು ಮಕ್ಕಳು, ಅದು ಹೇಗೋ ಆಗಿನ ಎಂಎಲ್ಸಿ ಸಿದ್ದಲಿಂಗಯ್ಯ ಅವರಿಗೆ ಕಾಗದ ಹಾಕಿ ಮತ್ತೆ ಸ್ಕೂಲಿಗೆ ಹೋಗುವಂತಾಯಿತು. ದಲಿತರನ್ನು ಹೇಗೆ ನಡೆದುಕೊಳ್ಳಬೇಕೆಂಬುದು ನಮ್ಮ ಮನೆಯವರಿಂದಷ್ಟೇ ಅಲ್ಲ, ಪಾಠ ಹೇಳುವ ಮೇಷ್ಟ್ರುಗಳೂ ಹೇಳಿಕೊಡುತ್ತಿರುವುದು ಇಲ್ಲಿನ ದುರಂತ.
ಬಸವರಾಜಯ್ಯ ಮತ್ತು ಗೌರಮ್ಮನ ಮದುವೆಯನ್ನು ಕೊಂಡಾಡಿ ಅವರ ಮಕ್ಕಳನ್ನು ಮುದ್ದಾಡಿದ್ದೇವೆ ಎಂದು ಹೇಳುವ ಜನರ ಇವತ್ತಿನ ಮನ ಪರಿವರ್ತನೆಗೆ ನಾನು ಕೃತಜ್ಞನಾಗಿದ್ದೇನೆ. ಈ ಬಗ್ಗೆ ಫೋನ್ ಮಾಡಿದ ಮಾಸ್ತರೊಬ್ಬರಿಗೆ ‘‘ನಿಮಗೆ ಎಷ್ಟು ವಯಸ್ಸು?’’ ಎಂದೆ. ‘‘ನಲ್ವತ್ತು’’ ಎಂದರು. ‘‘ಹಾಗಾದರೆ ನಲವತ್ತೈದು ವರ್ಷಕ್ಕೂ ಹಿಂದೆ ನಡೆದ ಮದುವೆ ವಿಷಯಗಳು ನಿಮಗೆ ಹೇಗೆ ಗೊತ್ತು?’’ ಎಂದೆ. ಮರುಮಾತಿಲ್ಲ.
ಇವತ್ತಿನವರೆಗೂ ಅಂತರ್ಜಾತಿ ಮದುವೆಯಾದವರು ಹಳ್ಳಿಗಳಲ್ಲಿ ಇರದೆ ಪರಾರಿಯಾಗುತ್ತಾರೆ. ಸಿಕ್ಕಿಬಿದ್ದರೆ ಮರ್ಯಾದೆ ಹತ್ಯೆ ಗ್ಯಾರಂಟಿ. ಆದರೆ ಅಂದು ಬಸವರಾಜಯ್ಯ ಜೀವನದ ಭದ್ರತೆಗೆ ಒಂದು ಕೆಲಸದಲ್ಲಿದ್ದರು. ಅದೂ ರೆವಿನ್ಯೂ ಇಲಾಖೆ. ಗೌರಮ್ಮ ಜಾತ್ಯತೀತ ನೆಲೆಯ ಆಸ್ಪತ್ರೆಯಲ್ಲಿದ್ದರು. ಅವರನ್ನು ಟೀಕಿಸಿದವರು ಹೆರಿಗೆ ಮಾಡಿಸಿಕೊಳ್ಳಲು ಹೋಗಬೇಕಿತ್ತು. ಇದನ್ನೇ ಎತ್ತಿ ಹಿಡಿದು ನಿಮ್ಮ ವಾದವೇ ಸುಳ್ಳು, ನಾವು ಅವರನ್ನು ಹೆಚ್ಚು ಗೌರವದಿಂದ ನಡೆಸಿಕೊಂಡಿದ್ದೇವೆ ಅನ್ನುವವರೆಲ್ಲ ಈಚಿನ ತಲೆಮಾರಿನವರು. ಬರೆದರೆ ಇನ್ನೊಂದು ಲೇಖನವಾಗುವಷ್ಟು ಸಾಮಗ್ರಿ ಇದ್ದ ಆ ಲೇಖನವನ್ನು ಸಂಗ್ರಹಿಸಿ ಎಷ್ಟು ಬೇಕೋ ಅಷ್ಟು ದಾಖಲಿಸಿದ್ದೇನೆ.
ನಾನು ಬಾಲ್ಯದಿಂದಲೇ ಅಸ್ಪಶ್ಯತೆಗೆ ತುತ್ತಾದ ಮಕ್ಕಳ ಕಣ್ಣುಗಳನ್ನು ನೋಡುತ್ತಾ ಬಂದವನು. ದಲಿತ ಕೇರಿಯಲ್ಲಿ ಹುಟ್ಟುವ ಮಗುವೊಂದು ತನ್ನ ಬದುಕಿನುದ್ದಕ್ಕೂ ಜಾತಿಯನ್ನು ಬಚ್ಚಿಟ್ಟುಕೊಂಡು ಮೇಲ್ಜಾತಿಗಳ ಅವ್ಯಕ್ತ ಅವಮಾನಗಳನ್ನು ಸಹಿಸಿಕೊಂಡು ಬದುಕಬೇಕಲ್ಲ ಎಂಬುದನ್ನು ನೆನೆಸಿಕೊಂಡರೆ ವಿಷಾದವಾಗುತ್ತದೆ. ಈ ನಮ್ಮ ಮಕ್ಕಳು ಊಟಕ್ಕೆ ಕುಳಿತ ಪಂಕ್ತಿಯಿಂದ ಮೇಲೇಳಿಸಿಕೊಂಡು ಬಂದಿವೆ. ಹೊಟೇಲಿನಲ್ಲಿ ಕಾಫಿ ಕುಡಿಯಲು ಹೋಗಿ ಹೊಡೆತ ತಿಂದು ಬಂದಿವೆ. ಈಗೇನೋ ಪ್ಲಾಸ್ಟಿಕ್ ಲೋಟ ಬಂದು ಜಾತ್ಯಂಧರು ಉಸಿರೆತ್ತದಂತೆ ಮಾಡಿವೆ. ಕೆರೆಗೆ ಈಜಾಡಲು ಹೋದ ಕಾರಣಕ್ಕೆ ಕಂಬಕ್ಕೆ ಕಟ್ಟಿ ಹೊಡಿಸಿಕೊಂಡಿವೆ. ಈ ಸಮಾಜದಲ್ಲಿ ಸುಸ್ಥಿತಿಗೆ ಬಂದ ಅಸ್ಪಶ್ಯರು ತಮಗಾದ ಅವಮಾನಗಳನ್ನು ಕೆಟ್ಟ ಕನಸುಗಳೆಂದು ಮರೆತುಬಿಡುತ್ತಾರೆ. ನೆನೆಸಿಕೊಳ್ಳಲು ಹಿಂಸೆಯಾಗಿ ಮನಸ್ಸು ದುಗುಡಗೊಳ್ಳುತ್ತದೆ. ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡವರು ಕೂಡ ಸುಸ್ಥಿತಿ ತಲುಪಿದ ನಮ್ಮನ್ನು ಮಾತನಾಡಿಸುವ ವರಸೆಯೇ ಬದಲಾಗುತ್ತದೆ. ಬಹುಶಃ ವಿಜಯ್ ಅಣ್ಣನಿಗೆ ಇದಾಗಿರಬಹುದು.
ಮತಾಂಧರು ಸಮಾನತೆಯ ಒಂದು ಸಣ್ಣ ಕರೆಂಟ್ ಶಾಕ್ಗೆ ಜಾಗ ಖಾಲಿ ಮಾಡುತ್ತಾರೆ, ಇಲ್ಲ ಮೇಲೆ ಬೀಳುತ್ತಾರೆ. ಮೇಲೆ ಬಿದ್ದವರಿಗೆ ತಾಳ್ಮೆಯಿಂದ ಉತ್ತರಿಸಿ ಅವರ ಕಣ್ಣು ತೆರೆಸುವುದು ಸಮಾನತೆಯ ಹರಿಕಾರರ ಜವಾಬ್ದಾರಿ. ಏಕೆಂದರೆ ಜಾತಿ ಈಗ ಒಂದು ಮೂಢನಂಬಿಕೆ. ಮೂಢನಂಬಿಕೆ ರೋಗಕ್ಕೆ ತುತ್ತಾದವರನ್ನು ಗುಣಮುಖರನ್ನಾಗಿಸುವುದು ಎಲ್ಲರ ಕರ್ತವ್ಯ. ಹೀಗೆ ಯೋಚಿಸುವಾಗ ಅಪ್ಪಟ ಬಸವ ತತ್ವ ಅನುಯಾಯಿ ಪಂಡಿತಾರಾಧ್ಯ ಸ್ವಾಮೀಜಿಗಳು ‘‘ಚಂದ್ರೇಗೌಡರೇ ನಿಮ್ಮ ಲೇಖನ ಓದಿದೆ. ಚೆನ್ನಾಗಿ ಬರೆದಿದ್ದೀರಿ. ಈ ಕಡೆ ಬಂದು ಹೋಗಿ’’ ಎಂದರು. ಸಂಚಾರಿ ವಿಜಯ್ನನ್ನು ಮಠಕ್ಕೆ ಕರೆಸಿ ಗೌರವಿಸಿದ್ದ, ಅಲ್ಲಿಗೆ ಹಲವು ಕಾರ್ಯಕ್ರಮಗಳಿಗೆ ಕರೆಸಿದ್ದ ಪಂಡಿತಾರಾಧ್ಯರ ಫೋನ್ ಕರೆ ನನ್ನ ಲೇಖನಕ್ಕೆ ಅಧಿಕೃತ ಮುದ್ರೆಯನ್ನೊತ್ತಿದೆ. ತುಂಬಾ ಸಾತ್ವಿಕ ಸ್ವಭಾವದ, ಮೋಹಕ ಕಣ್ಣುಗಳ ವಿಜಯ್, ಜಾತಿಯ ತಾರತಮ್ಯದ ವಿಷಯ ಬಂದಾಗ ಆತನ ಕಣ್ಣುಗಳು ಕಿಡಿಕಾರುತ್ತಿದ್ದವು. ಇದಕ್ಕೆ ಪೂರಕವೆಂಬಂತೆ, ಪಂಚನಹಳ್ಳಿಯ ವಿಜಯ್ನ ತಂದೆಯ ಸಹೋದ್ಯೋಗಿಯೊಬ್ಬರು ಕಳುಹಿಸಿರುವ ವಾಟ್ಸ್ಆ್ಯಪ್ ಮಾಹಿತಿಯನ್ನು ತಮ್ಮ ಅವಗಾಹನೆಗೆ ತರುತ್ತೇನೆ.
‘‘ನಾನು ಪಂಚನಹಳ್ಳಿಯವನು ಸಾರ್. ಸಂಚಾರಿ ವಿಜಯ್ ಚಿಕ್ಕವನಾಗಿದ್ದಾಗ ನಾವೆಲ್ಲ ಎತ್ತಿ ಆಡಿಸಿದ್ದೆವು. ಆತನ ತಂದೆ ತಾಯಿಗಳಿಬ್ಬರೂ ಸರಕಾರಿ ನೌಕರರಾಗಿದ್ದರು. ಕೆಲವು ಮೇಲ್ಜಾತಿ ಜನ ವಿಜಯ್ ತಾಯಿ ನರ್ಸ್ ಆಗಿದ್ದಾಗ ಹಳ್ಳಿಗಳ ಮನೆಗಳ ಸಮೀಕ್ಷೆಗೆ ಹೋದಾಗ ಮನೆಯ ಒಳಕ್ಕೆ ಕರೆಯುತ್ತಿರಲಿಲ್ಲ. ವಿಜಯ್ ಸಿನೆಮಾ ಲೋಕಕ್ಕೆ ಬಂದ ಮೇಲೂ ಜಾತಿ ಮುನ್ನೆಲೆಗೆ ಬಂದು ಸಾಕಷ್ಟು ನೋವು ಅನುಭವಿಸುತ್ತಿರುವುದನ್ನು ನನ್ನ ಬಳಿಯೇ ಒಂದೆರಡು ಬಾರಿ ಸೂಚ್ಯವಾಗಿ ಹೇಳಿಕೊಂಡಿದ್ದ. ನಾನು ಅಪ್ಪನ ಜಾತಿ ಹೇಳಿಕೊಳ್ಳಲೋ, ಅವ್ವನ ಜಾತಿ ಹೇಳಿಕೊಳ್ಳುವುದೋ ಎಂಬುದು ಆತನನ್ನು ಕಾಡುತ್ತಲೇ ಇತ್ತು. ಆತನಿಗೆ ಸಿನೆಮಾ ಇಂಡಸ್ಟ್ರಿಯವರೂ ಜಾತಿಯಿಂದ ಅವಮಾನ ಮಾಡಿದ್ದರು. ವಿಜಯ್ ನಟನಾದ ಮೇಲೆ ಅಮ್ಮನ ಜಾತಿಬಿಟ್ಟು ಅಪ್ಪನ ಜಾತಿಯಿಂದ ಗುರುತಿಸಿದ್ದರು. ಆದರೂ, ರಾಷ್ಟ್ರಪ್ರಶಸ್ತಿ ಬಂದಾಗಲಾಗಲಿ, ನಟನಾದ ಮೇಲಾಗಲಿ ಕೆಲ ಲಿಂಗಾಯತರು ನಮ್ಮ ಹುಡುಗ ಎಂದು ಒಪ್ಪಿಕೊಳ್ಳಲಿಲ್ಲ. ಅಂತ್ಯಸಂಸ್ಕಾರದಲ್ಲಿ ಜಾತಿ ತಂದು ಜಾತಿ ಸ್ವಾಮಿಗಳಿಂದ ಪೂಜೆ ಪುರಸ್ಕಾರ ಮಾಡಿದ್ದು ಖಂಡನೀಯ. ಈತನ ಗೆಳೆಯ ರಾಘು ವಿಜಯನ ಒಳ್ಳೆಯತನಕ್ಕೆ ಜಾಗ ಕೊಟ್ಟದ್ದು ಅಭಿನಂದನೀಯ.’’
-ಎಚ್. ವಿ. ವೆಂಕಟಾಚಲ
ಇನ್ನುಳಿದ ವಾಟ್ಸ್ಆ್ಯಪ್ ವಿವರಗಳು ಅಗತ್ಯವಿಲ್ಲ ಎಂದು ಭಾವಿಸಿದ್ದೇನೆ.







