ದಿಲ್ಲಿ ಆಮ್ಲಜನಕದ ಬೇಡಿಕೆಯನ್ನು 4 ಪಟ್ಟು ಉತ್ಪ್ರೇಕ್ಷಿಸಿದೆ ಎಂದು ಹೇಳಲು ಸಾಧ್ಯವಿಲ್ಲ: ಏಮ್ಸ್ ವರಿಷ್ಠ

ಹೊಸದಿಲ್ಲಿ, ಜೂ. 26: ಕೋವಿಡ್ ನ ಎರಡನೇ ಅಲೆಯ ಉತ್ತುಂಗದ ಸ್ಥಿತಿಯ ಸಂದರ್ಭ ದಿಲ್ಲಿ ಸರಕಾರ ತನ್ನ ಆಮ್ಲಜನಕದ ಬೇಡಿಕೆಯನ್ನು ನಾಲ್ಕು ಪಟ್ಟು ಉತ್ಪ್ರೇಕ್ಷಿಸಿದೆ ಎಂದು ಅಂತಿಮ ನಿರ್ಧಾರಕ್ಕೆ ಬರುವುದು ಸರಿಯಾಗಿರುವುದಿಲ್ಲ ಎಂದು ಏಮ್ಸ್ನ ವರಿಷ್ಠ ಡಾ. ರಣದೀಪ್ ಗುಲೇರಿಯಾ ಶನಿವಾರ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿಯೋಜಿತ ಗುಲೇರಿಯಾ ನೇತೃತ್ವದ ಲೆಕ್ಕ ಪರಿಶೋಧನಾ ಸಮಿತಿ ಸಿದ್ಧಪಡಿಸಿದ ಮಧ್ಯಂತರ ವರದಿ ಕುರಿತಂತೆ ಆಪ್ ನೇತೃತ್ವದ ದಿಲ್ಲಿ ಸರಕಾರ ಹಾಗೂ ಬಿಜೆಪಿ ನಡುವೆ ಶುಕ್ರವಾರ ಭಿನ್ನಾಭಿಪ್ರಾಯ ಹುಟ್ಟಿಕೊಂಡಿದೆ. ವರದಿಯ ಅಸ್ತಿತ್ವದ ಬಗ್ಗೆ ಬಿಜೆಪಿ ಸುಳ್ಳು ಹೇಳಿದೆ ಎಂದು ದಿಲ್ಲಿ ಉಪ ಮುಖ್ಯಮಂತ್ರಿ ಹಾಗೂ ಆಪ್ನ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ. ವರದಿಗೆ ತಜ್ಞರ ಸಮಿತಿ ಅನುಮೋದನೆಯಾಗಲಿ, ಸಹಿಯಾಗಲಿ ಇಲ್ಲ ಎಂದು ಅವರು ಬೆಟ್ಟು ಮಾಡಿದ್ದಾರೆ.
‘‘ದಿಲ್ಲಿ ಆಮ್ಲಜನಕ ಲೆಕ್ಕಪರಿಶೋಧನೆ ಮಧ್ಯಂತರ ವರದಿ. ನಾವು ಅಂತಿಮ ವರದಿಗಾಗಿ ಕಾಯಬೇಕು’’ ಎಂದು ಗುಲೇರಿಯಾ ಅವರು ಶನಿವಾರ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ದಿಲ್ಲಿ ಆಮ್ಲಜನಕದ ಬೇಡಿಕೆಯನ್ನು ನಾಲ್ಕುಪಟ್ಟು ಉತ್ಪೇಕ್ಷಿಸಿದೆಯೇ ಎಂದು ಪ್ರಶ್ನಿಸಿದಾಗ ಡಾ. ಗುಲೇರಿಯಾ, ‘‘ನಾವು ಹಾಗೆ ಹೇಳಿದ್ದೇವೆ ಎಂದು ಭಾವಿಸುವುದಿಲ್ಲ’’ ಎಂದರು. ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದೆ. ಇದರ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಏನು ಹೇಳುತ್ತದೆ ಎಂದು ನಾವು ಕಾದು ನೋಡಬೇಕು. ಇತರ ಅಂಶಗಳನ್ನು ಪರಿಶೀಲಿಸುವ ಅಗತ್ಯತೆ ಇದೆ ಎಂದು ಡಾ. ಗುಲೇರಿಯಾ ಹೇಳಿದರು.
ಕೋರೋನ ಎರಡನೇ ಅಲೆ ಉತ್ತುಂಗದ ಸ್ಥಿತಿಯಲ್ಲಿರುವಾಗ ದಿಲ್ಲಿ ಸರಕಾರ ಆಮ್ಲಜನಕದ ಬೇಡಿಕೆಯನ್ನು ನಾಲ್ಕು ಪಟ್ಟು ಉತ್ಪೇಕ್ಷಿಸಿತ್ತು. ದಿಲ್ಲಿಗೆ ಹೆಚ್ಚುವರಿ ಆಮ್ಲಜನಕ ಪೂರೈಕೆ ಮಾಡಿರುವುದರಿಂದ ಇತರ ರಾಜ್ಯಗಳಿಗೆ ಆಮ್ಲಜನಕದ ಕೊರತೆ ಉಂಟಾಯಿತು ಎಂದು ಬಿಜೆಪಿಯ ಆಪ್ತ ವಲಯ ಪ್ರತಿಪಾದಿಸುತ್ತಿರುವ ವರದಿಯೊಂದು ಶುಕ್ರವಾರ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿತ್ತು.







