ಮಹಾರಾಷ್ಟ್ರದಲ್ಲಿ ಗರಿಷ್ಟ ಡೆಲ್ಟಾ ಪ್ಲಸ್ ಪ್ರಕರಣ ಪತ್ತೆ: ಕೇಂದ್ರ ಸರಕಾರ
ಮುಂಬೈ, ಜೂ.26: ಕೊರೋನ ವೈರಸ್ ನ ರೂಪಾಂತರಿತ ತಳಿ ಡೆಲ್ಟಾ ವೈರಸ್ ಸೋಂಕಿನ 51 ಪ್ರಕರಣ 12 ರಾಜ್ಯಗಳಲ್ಲಿ ಪತ್ತೆಯಾಗಿದ್ದು 22 ಪ್ರಕರಣಗಳಿರುವ ಮಹಾರಾಷ್ಟ್ರ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ ಸರಕಾರ ಶನಿವಾರ ಹೇಳಿದೆ.
ಕಳೆದ 3 ತಿಂಗಳಲ್ಲಿ ನಡೆಸಿದ 45,000ಕ್ಕೂ ಅಧಿಕ ಸ್ಯಾಂಪಲ್ ಗಳ ಪರೀಕ್ಷೆಯಲ್ಲಿ 51 ಪ್ರಕರಣ ಪತ್ತೆಯಾಗಿದ್ದು ದೇಶದಲ್ಲಿ ಡೆಲ್ಟಾ ಪ್ಲಸ್ ಪ್ರಕರಣ ಸೀಮಿತ ಸಂಖ್ಯೆಯಲ್ಲಿದೆ. ಯಾವುದೇ ರಾಜ್ಯದಲ್ಲಿ ಇದು ಉಲ್ಬಣಗೊಳ್ಳುವ ಲಕ್ಷಣವಿದೆ ಎಂದು ಊಹಿಸಬಾರದು ಎಂದು ಇದೇ ಸಂದರ್ಭ ಸರಕಾರ ಸ್ಪಷ್ಟಪಡಿಸಿದೆ.
ಮಹಾರಾಷ್ಟ್ರದಲ್ಲಿ 22, ತಮಿಳುನಾಡಿನಲ್ಲಿ 9, ಮಧ್ಯಪ್ರದೇಶದಲ್ಲಿ 7, ಕೇರಳದಲ್ಲಿ 3, ಪಂಜಾಬ್ ಮತ್ತು ಗುಜರಾತ್ನಲ್ಲಿ ತಲಾ 2, ಆಂಧ್ರಪ್ರದೇಶ, ಒಡಿಶಾ, ರಾಜಸ್ತಾನ, ಜಮ್ಮು-ಕಾಶ್ಮೀರ, ಹರ್ಯಾಣ ಮತ್ತು ಕರ್ನಾಟಕದಲ್ಲಿ ತಲಾ 1 ಪ್ರಕರಣ ಪತ್ತೆಯಾಗಿದೆ. ಈ ರಾಜ್ಯಗಳು ಕಳುಹಿಸಿದ ಸ್ಯಾಂಪಲ್ಗಳಲ್ಲಿ 50%ಕ್ಕೂ ಅಧಿಕ ಸ್ಯಾಂಪಲ್ಗಳಲ್ಲಿ ಸೋಂಕಿನ ಲಕ್ಷಣ ದೃಢಪಟ್ಟಿದೆ ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ(ಎನ್ಸಿಡಿಸಿ)ದ ನಿರ್ದೇಶಕ ಸುಜೀತ್ ಸಿಂಗ್ ಹೇಳಿದ್ದಾರೆ.
ಡೆಲ್ಟಾ ತಳಿಗೆ ಹೋಲಿಸಿದರೆ ಡೆಲ್ಟಾ ಪ್ಲಸ್ ಬಿ.1.617.2.1 ಎಂಬ ಹೆಚ್ಚುವರಿ ವ್ಯತ್ಯಾಸವನ್ನು ಒಳಗೊಂಡಿದೆ. ಡೆಲ್ಟಾ ಪ್ಲಸ್ ಕೆ417ಎನ್ ಆನುವಂಶಿಕ ತಳಿಯನ್ನು ಆರ್ಜಿಸಿಕೊಂಡಿರುವುದು ಕಂಡು ಬಂದಿದೆ. ಡೆಲ್ಟಾ ತಳಿಯಂತೆಯೇ ಡೆಲ್ಟಾ ಪ್ಲಸ್ ಕೂಡಾ ಪ್ರಸರಣ ಸಾಮರ್ಥ್ಯವನ್ನು ಒಳಗೊಂಡಿದೆ. ಡೆಲ್ಟಾ ವೈರಸ್ ಅನ್ನು ವೇರಿಯೆಂಟ್ ಆಫ್ ಕನ್ಸರ್ನ್(ವಿಒಸಿ) ಎಂದು ಗುರುತಿಸಿರುವುದರಿಂದ ಡೆಲ್ಟಾ ಪ್ಲಸ್ ಅನ್ನು ಕೂಡಾ ವಿಒಸಿ ಎಂದೇ ಗುರುತಿಸಬಹುದಾಗಿದೆ. ಕೋವಿಡ್ 2ನೇ ಅಲೆ ದೇಶದಲ್ಲಿ ಅತ್ಯಂತ ಶೀಘ್ರವಾಗಿ ಉಲ್ಬಣಗೊಳ್ಳಲು ಡೆಲ್ಟಾ ವೇರಿಯಂಟ್ ಮೂಲ ಕಾರಣವಾಗಿದೆ. ಕೊರೋನ ಸೋಂಕು ಪ್ರಕರಣಗಳಲ್ಲಿ ವಿಒಸಿ ಪ್ರಮಾಣ 2021ರ ಮೇ ತಿಂಗಳಿನಲ್ಲಿ 10.31% ಇದ್ದರೆ 2021ರ ಜೂನ್ನಲ್ಲಿ 51%ಕ್ಕೆ ಹೆಚ್ಚಿದೆ ಎಂದು ಸುಜೀತ್ ಸಿಂಗ್ ಹೇಳಿದ್ದಾರೆ.
ಡೆಲ್ಟಾ ಪ್ಲಸ್ ರೂಪಾಂತರಿತ ತಳಿ 12 ದೇಶಗಳಲ್ಲಿ ಪತ್ತೆಯಾಗಿದ್ದು ಭಾರತದ 12 ರಾಜ್ಯಗಳಲ್ಲಿ ದೃಢಪಟ್ಟಿದೆ. ಆದರೆ ಇದು ಸ್ಥಳೀಯವಾಗಿ ಸೀಮಿತವಾಗಿದೆ ಎಂದು ಭಾರತೀಯ ವೈದ್ಯವಿಜ್ಞಾನ ಸಮಿತಿ(ಐಸಿಎಂಆರ್)ನ ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ ಹೇಳಿದ್ದಾರೆ. ಈ ಸೋಂಕಿನ ಮೇಲೆ ಕೊರೋನ ಸೋಂಕಿನ ಲಸಿಕೆಯ ಪರಿಣಾಮವನ್ನು ಅರಿಯಲು ಡೆಲ್ಟಾ ಪ್ಲಸ್ ಸೋಂಕಿನ ಮಾದರಿಯನ್ನು ಐಸಿಎಂಆರ್-ಎನ್ಐವಿ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ್ದು 10 ದಿನದೊಳಗೆ ವರದಿ ಕೈಸೇರಲಿದೆ. ದೇಶದಲ್ಲಿ ಕೊರೋನ ಸೋಂಕಿನ 2ನೇ ಅಲೆ ಇನ್ನೂ ಮುಕ್ತಾಯವಾಗಿಲ್ಲ. 75 ಜಿಲ್ಲೆಗಳಲ್ಲಿ ಇನ್ನೂ 10%ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ ಮತ್ತು 92 ಜಿಲ್ಲೆಗಳಲ್ಲಿ 5ರಿಂದ 10%ದಷ್ಟು ಪ್ರಕರಣಗಳಿವೆ. ದೇಶದಲ್ಲಿ ಸೋಂಕಿನ ವಿರುದ್ಧದ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಎರಡೂ ಸಾರ್ಸ್-ಸಿಒವಿ-2 ತಳಿಗಳ ವಿರುದ್ಧ ಪರಿಣಾಮಕಾರಿಯಾಗಿದೆ ಎಂದವರು ಹೇಳಿದ್ದಾರೆ.







