ಜಾರಿ ನಿರ್ದೇಶನಾಲಯದ ಸಮನ್ಸ್ ಪಾಲಿಸದ ದೇಶ್ ಮುಖ್ ವಿಚಾರಣೆಗೆ ಗೈರು

ಮುಂಬೈ, ಜೂ.26: ಬಹುಕೋಟಿ ಲಂಚ ಮತ್ತು ಹಣವಸೂಲಿ ಜಾಲಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಶನಿವಾರ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದ್ದರೂ , ದೇಶ್ಮುಖ್ ವಿಚಾರಣೆಗೆ ಹಾಜರಾಗಿಲ್ಲ ಎಂದು ವರದಿಯಾಗಿದೆ.
ದೇಶ್ಮುಖ್ ಬದಲು ಅವರ ವಕೀಲರು ಜಾರಿ ನಿರ್ದೇಶನಾಲಯದ ಕಚೇರಿಗೆ ತೆರಳಿ, ವಿಚಾರಣೆಗೆ ಹಾಜರಾಗಲು ಹೆಚ್ಚುವರಿ ಅವಕಾಶ ಕೋರಿದರು. ಇದನ್ನು ಪರಿಗಣಿಸಿ ಹೊಸದಾಗಿ ಸಮನ್ಸ್ ಜಾರಿಗೊಳಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಅನಿಲ್ ದೇಶ್ಮುಖ್ ಅವರ ಮುಂಬೈ ಮತ್ತು ನಾಗಪುರದ ನಿವಾಸ, ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಪಲಾಂದೆ ಮತ್ತು ಆಪ್ತ ಸಹಾಯಕ ಕುಂದನ್ ಶಿಂಧೆ ನಿವಾಸದಲ್ಲಿ ಶುಕ್ರವಾರ ಶೋಧ ಕಾರ್ಯಾಚರಣೆ ನಡೆಸಿದ್ದ ಜಾರಿ ನಿರ್ದೇಶನಾಲಯ, ತಡರಾತ್ರಿ ಪಲಾಂದೆ ಮತ್ತು ಶಿಂಧೆಯನ್ನು ವಶಕ್ಕೆ ಪಡೆದಿತ್ತು. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದ ಬಳಿಕ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಹಾರಾಷ್ಟ್ರದ ಸಮ್ಮಿಶ್ರ ಸರಕಾರದಲ್ಲಿ ಗೃಹ ಸಚಿವರಾಗಿದ್ದ ದೇಶ್ಮುಖ್ ಮುಂಬೈಯ ಬಾರ್ ಗಳು ಮತ್ತು ರೆಸ್ಟಾರೆಂಟ್ ಗಳಿಂದ 100 ಕೋಟಿ ರೂ. ಲಂಚ ವಸೂಲಿ ಮಾಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದರು ಎಂದು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿ ಪರಮ್ಬೀರ್ ಸಿಂಗ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡ ಬಳಿಕ ದೇಶ್ಮುಖ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ದೇಶ್ಮುಖ್ ಗೆ ಸುಮಾರು 4 ಕೋಟಿ ರೂ. ಲಂಚ ನೀಡಿರುವುದಾಗಿ ಮುಂಬೈಯ 10 ಬಾರ್ ಗಳ ಮಾಲಕರು ಹೇಳಿಕೆ ನೀಡಿದ್ದಾರೆ ಎಂದು ಸಿಬಿಐ ಹೇಳಿದೆ.







