40 ಕೋಟಿ ಜನರಿಗೆ ಕೋವಿಡ್ ಪರೀಕ್ಷೆ: ಐಸಿಎಂಆರ್

ಹೊಸದಿಲ್ಲಿ, ಜೂ.26: ಭಾರತವು 40 ಕೋಟಿ ಜನರಿಗೆ ಕೋವಿಡ್ ಪರೀಕ್ಷೆ ನಡೆಸಿದ ಸಾಧನೆ ದಾಖಲಿಸಿದ್ದು, ಜೂನ್ ತಿಂಗಳಿನಲ್ಲಿ ಪ್ರತೀ ದಿನಾ ಸರಾಸರಿ 18 ಲಕ್ಷ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ಶನಿವಾರ ಹೇಳಿದೆ.
2021ರ ಜೂನ್ 1ರವರೆಗೆ ದೇಶದಲ್ಲಿ 35 ಕೋಟಿ ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಜೂನ್ 25ರ ವರೆಗಿನ ಅಂಕಿಅಂಶದ ಪ್ರಕಾರ ದೇಶದಲ್ಲಿ 40,18,11,892 ಪರೀಕ್ಷೆ ನಡೆಸಲಾಗಿದೆ. ಲಭ್ಯ ತಂತ್ರಜ್ಞಾನವನ್ನು ಬಳಸಿಕೊಂಡು ದೇಶದಾದ್ಯಂತ ಕೋವಿಡ್ ಪರೀಕ್ಷಾ ಕೇಂದ್ರಗಳನ್ನು ತೆರೆಯುವ ಮೂಲಕ ಪರೀಕ್ಷೆ ನಡೆಸುವ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಹೇಳಿದೆ. ಕೋವಿಡ್ ಪರೀಕ್ಷೆಯ ಪ್ರಮಾಣ ಹೆಚ್ಚಿರುವುದರಿಂದ ಸೋಂಕಿತರನ್ನು ಆರಂಭದಲ್ಲಿಯೇ ಗುರುತಿಸಿ, ಅವರನ್ನು ಪ್ರತ್ಯೇಕವಾಗಿರಿಸಲು ಮತ್ತು ಸೂಕ್ತ ಚಿಕಿತ್ಸೆ ಒದಗಿಸಲು ಅನುಕೂಲವಾಗಿದೆ.
ಇದರಿಂದ ಸೋಂಕಿನಿಂದ ಮೃತರಾಗುವ ಪ್ರಮಾಣ ನಿರಂತರ ಕಡಿಮೆ ಮಟ್ಟದಲ್ಲಿರುವಂತಾಗಿದೆ ಎಂದು ಐಸಿಎಂಆರ್ ಪ್ರಧಾನ ನಿರ್ದೇಶಕ ಪ್ರೊ. ಬಲರಾಮ ಭಾರ್ಗವ ಹೇಳಿದ್ದಾರೆ. ಪರೀಕ್ಷೆಯಲ್ಲಿ ಈ ಸಾಧನೆ ದಾಖಲಿಸಲು ಭಾರತ 5ಟಿ ಸೂತ್ರವನ್ನು ಯಶಸ್ವಿಯಾಗಿ ಜಾರಿಗೊಳಿಸಿರುವುದು ಕಾರಣವಾಗಿದೆ. ಟೆಸ್ಟ್, ಟ್ರ್ಯಾಕ್, ಟ್ರೇಸ್, ಟ್ರೀಟ್ ಮತ್ತು ಟೆಕ್ನಾಲಜಿಯ ಸದ್ಬಳಕೆ ಈ 5 ಸೂತ್ರ ಕೊರೋನ ಹರಡದಂತೆ ನಿಯಂತ್ರಿಸಲು ಸಹಕಾರಿಯಾಗಿದೆ ಎಂದವರು ಹೇಳಿದ್ದಾರೆ.





