Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ದನ, ಕುರಿ ಮತ್ತು ಎಮ್ಮೆಗಳ ನಡುವಿನ...

ದನ, ಕುರಿ ಮತ್ತು ಎಮ್ಮೆಗಳ ನಡುವಿನ ಸಂಘರ್ಷಗಳು

ಇತಿಹಾಸದ ‘ಮಿಸ್ಸಿಂಗ್ ಲಿಂಕ್’

ಡಾ.ನೆಲ್ಲುಕುಂಟೆ ವೆಂಕಟೇಶ್ಡಾ.ನೆಲ್ಲುಕುಂಟೆ ವೆಂಕಟೇಶ್27 Jun 2021 12:23 AM IST
share
ದನ, ಕುರಿ ಮತ್ತು ಎಮ್ಮೆಗಳ ನಡುವಿನ ಸಂಘರ್ಷಗಳು

► ಭಾಗ-3 

ಎಮ್ಮೆ, ಹಸು ಮತ್ತು ಕುರಿಗಳನ್ನು ಸಾಕುವ ಬುಡಕಟ್ಟುಗಳು ತಮ್ಮ ವಿಕಾಸದ ಹಾದಿಯಲ್ಲಿ ಭೀಕರ ಸಂಘರ್ಷಗಳನ್ನು ಮಾಡಿಕೊಂಡಿವೆ. ಕಾಡು ಮತ್ತು ಹುಲ್ಲುಗಾವಲು, ನೀರಿನ ತಾಣಗಳ ಮೇಲಿನ ಯಜಮಾನಿಕೆಗಾಗಿ ಅಪಾರ ಸಾವು-ನೋವುಗಳು ಸಂಭವಿಸಿವೆ. ಮರುಭೂಮಿ ಸಂಸ್ಕೃತಿಗಳಲ್ಲಿ ಓಯಸಿಸ್ಸುಗಳಿಗಾಗಿ ಕಡಿಮೆ ಸಂಘರ್ಷ ನಡೆದಿಲ್ಲ. ಜುಂಜಪ್ಪನ ಕಾವ್ಯದಲ್ಲೂ ನೀರಿಗಾಗಿ ಹಲವು ಸಂಘರ್ಷಗಳು ನಡೆದಿವೆ.

ಗುಂಥರ್ ಸೊಂಥೈಮರ್ ತನ್ನ ‘ಪ್ಯಾಸ್ಟೊರಲ್ ಡೈಟೀಸ್ ಆಫ್ ವೆಸ್ಟರ್ನ್ ಇಂಡಿಯಾ’ ಕೃತಿಯಲ್ಲಿ ಕುರಿಗಾಹಿಗಳು ಮತ್ತು ಎಮ್ಮೆಗಾಹಿಗಳ ನಡುವೆ ನಡೆದ ಸಂಘರ್ಷ ಕುರಿತ ಜನಪದ ಕತೆಯೊಂದನ್ನು ದಾಖಲಿಸಿದ್ದಾನೆ. ಮ್ಹಾಕುಬಾಯಿಯ (ಚಿಂಚಲಿ ಮಾಯಮ್ಮ) ಸೋದರನಾದ ಬೀರೋಬ ಕುರಿಗಳನ್ನು ಮೇಯಿಸಲು ಸೊಲ್ಲಾಪುರದ ಹುಲ್ಲುಮಾಳಗಳಿಗೆ ಹೋಗುತ್ತಾನೆ. ಆ ಮಾಳಗಳು ಮತ್ತು ಕಾಡುಗಳಲ್ಲಿ ರೆಡ್ಡೇಶ್ವರ ಎಂಬ ಎಮ್ಮೆ ದೇವರು ವಾಸಿಸುತ್ತಿರುತ್ತಾನೆ. ಈ ಪ್ರದೇಶಕ್ಕೆ ಕಾವಲಾಪುರ ಎಂದೂ ಕರೆಯಲಾಗುತ್ತದೆ. ಈ ಎಮ್ಮೆ ದೇವರು ಬೀರೋಬನ ಕುರಿಗಳನ್ನು ಒಂದಾದ ಮೇಲೆ ಒಂದನ್ನು ತಿನ್ನತೊಡಗುತ್ತಾನೆ. ಇದು ಬೀರೋಬನಿಗೆ ಗೊತ್ತಾಗುವುದಿಲ್ಲ. ಆದರೆ ಅವನ ಸೋದರಿಯಾದ ಮ್ಹಾಕುಬಾಯಿಯ ದಿವ್ಯ ದೃಷ್ಟಿಗೆ ಗೊತ್ತಾಗುತ್ತದೆ. ಸಿಟ್ಟಿಗೆದ್ದ ಆಕೆ ರೆಡ್ಡೇಶ್ವರನ ಮೇಲೆ ಎರಗಿ ಕೊಂದು ಹಾಕುತ್ತಾಳೆ. ಕೆಳಕ್ಕೆ ಬಿದ್ದ ರೆಡ್ಡೇಶ್ವರ (ರಾಕ್ಷಸನೆಂಬಂತೆ ಚಿತ್ರಿಸಲಾಗುತ್ತದೆ) ಇನ್ನೇನು ಕೊನೆಯುಸಿರು ಎಳೆಯಬೇಕು ಎನ್ನುವ ಅವಸ್ಥೆಗೆ ಬಂದಾಗ ‘ನಾನು ನಿನ್ನ ಕೈಗಳಲ್ಲಿ ಪ್ರಾಣ ಬಿಡುತ್ತಿದ್ದೇನೆ. ಆದರೆ ಪ್ರತಿ ಹನ್ನೆರಡು ತಿಂಗಳಿಗೆ ಒಮ್ಮೆ ನನ್ನ ವೇಷವನ್ನು ನೀನು ತೊಡಬೇಕು’ ಎಂದು ಹೇಳಿ ಪ್ರಾಣ ಬಿಡುತ್ತಾನೆ. ಅವನ ಕೋರಿಕೆಯಂತೆ ಈಗಲೂ ಮಾಘ ಮಾಸದಲ್ಲಿ ಮಾಯವ್ವನ ದೇವಸ್ಥಾನದ ಪೂಜಾರಿಗಳು ರೆಡ್ಡೇಶ್ವರನ ವೇಷ ಭೂಷಣಗಳನ್ನು ತೊಟ್ಟು ಪೂಜಿಸುತ್ತಾರೆ.(ಪು.41) ಈ ಕತೆಯು ಹಲವು ಸಂಗತಿಗಳನ್ನು ಹೇಳುತ್ತಿದೆ. ಸೊಂಥೈಮರ್ ಪ್ರಕಾರ ಈ ಕತೆಗಳು ರೂಪುಗೊಂಡಿರುವುದು ಕ್ರಿ.ಪೂ. 3ನೇ ಶತಮಾನದ ಆಸುಪಾಸಿನಲ್ಲಿ. ಮಕ್ಕಳಿಗೆ ಹಾಲು ಕುಡಿಸುತ್ತಿರುವ ಅರೆ ನಗ್ನ ಚಿತ್ರಗಳ ಕಾಲವನ್ನು ವಿವಿಧ ಮಾನದಂಡಗಳ ಮೂಲಕ ನಿರ್ಣಯ ಮಾಡಲಾಗಿದೆ. ಸಿಂಧೂ ಕಣಿವೆಯಲ್ಲಿ ಲಜ್ಜಾಗೌರಿ ಪರಂಪರೆಯ ಮೂಲರೂಪದ ಮಾತೃಕೆಯ ಚಿತ್ರಗಳು ದೊರೆತಿವೆ. ಆ ಪರಂಪರೆ ಮತ್ತೆ ಕ್ರಿಯಾಶೀಲ ರೂಪದಲ್ಲಿ ಮಹಾರಾಷ್ಟ್ರ-ಕರ್ನಾಟಕಗಳ ಪಶುಪಾಲಕ ಸಂಪ್ರದಾಯಗಳಲ್ಲಿ ಕಾಣಿಸಿಕೊಂಡಿದೆ. ಸ್ತ್ರೀ ದೇವತೆಗಳು ವ್ಯಾಪಕ ಪ್ರಮಾಣದಲ್ಲಿ ಕಾಣಿಸಿಕೊಂಡಿರುವುದು ಝರತುಷ್ಟ್ರನ ಆಗಮನಕ್ಕೆ ಮೊದಲಿನ ಮೆಸಪೊಟೇಮಿಯಾದ ಬಯಲುಗಳಲ್ಲಿ, ಸಿಂಧೂ ಕಣಿವೆಯಲ್ಲಿ ಹಾಗೂ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದ ಭಾಗಗಳಲ್ಲಿ. ನಂತರದ ಕಾಲಘಟ್ಟದಲ್ಲಿ ಬಂಗಾಳ ಮತ್ತು ಅಸ್ಸಾಮಿನ ಭಾಗಗಳಲ್ಲಿ ಸ್ತ್ರೀದೇವತೆಗಳ ಪರಂಪರೆ ಕಾಣಿಸುತ್ತದೆ. ಸಿಂಧೂ ಕಣಿವೆಯ ನಾಗರಿಕತೆಯ ಅವಸಾನದ ನಂತರ ಅಲ್ಲಿನ ನೆನಪುಗಳನ್ನು ಹೊತ್ತ ಜನರು ದಕ್ಷಿಣಕ್ಕೆ ಬಂದಿದ್ದಾರೆ. ಸಿಂಧೂ ಕಣಿವೆಯಂತಹದೇ ನಾಗರಿಕತೆಯನ್ನು ಸುಮಾರು 3,500 ವರ್ಷಗಳ ಹಿಂದೆ ತಮಿಳುನಾಡಿನ ಕೀಲಡಿಯಲ್ಲಿ ನಿರ್ಮಿಸಿದ್ದಾರೆ. ಪುರಾಣಗಳ ಪ್ರಕಾರ ಕೂಡ ವಿಂಧ್ಯವನ್ನು ದಾಟಿ ಬಂದ ಮೊದಲ ಮುನಿ ಅಗಸ್ತ್ಯ. ಅಗಸ್ತ್ಯನನ್ನು ಅಕ್ಕಟಿ ಎಂದೂ ಕರೆಯಲಾಗುತ್ತದೆ. ಅಕ್ಕಟಿ ಅಥವಾ ಅಕ್ಕಡಿ ಎಂದರೆ ನಗರ, ಕೋಟೆ ಎಂಬ ಅರ್ಥವೂ ಇದೆ. (ನಮ್ಮ ಕೃಷಿಕರು ಹೊಲಗಳಲ್ಲಿ ಅಕ್ಕಡಿ ಎಂಬ ಸಾಲುಗಳನ್ನು ಬಿತ್ತುತ್ತಾರೆ. ಬೆಳೆಗಳಿಗೆ ರಕ್ಷಣೆ ಒದಗಿಸುವ ಕೆಲಸವನ್ನು ಇವು ಮಾಡುತ್ತವೆ ಎಂಬ ತಿಳುವಳಿಕೆ ರೈತರಿಗಿದೆ). ಈತ ವಾಸ್ತುಶಿಲ್ಪಿಗಳು, ಧನವಂತರೂ ಸೇರಿದಂತೆ ಸುಮಾರು 18 ಜನರನ್ನು ಕರೆದುಕೊಂಡು ಬಂದ ಎಂದು ಹೇಳಲಾಗುತ್ತದೆ (ವಿವರಗಳಿಗೆ ಅರ್ಲಿ ಇಂಡಿಯನ್ಸ್ ನೋಡಿ). ಪುರಾತನ ಮೆಸಪೊಟೇಮಿಯಾದ ಬಯಲುಗಳಲ್ಲಿ ಅಕ್ಕಡಿಯನ್ ಎಂಬ ಸಾಮ್ರಾಜ್ಯದ ಪ್ರಸ್ತಾಪ ಪದೇ ಪದೇ ಬರುತ್ತದೆ. ಎಮ್ಮೆ ದೇವರಾದ ರೆಡ್ಡೇಶ್ವರನ ಹುಲ್ಲು ಮಾಳಗಳಿಗೆ ಕುರಿಗಳನ್ನು ಬಿಟ್ಟವನು ಬೀರೋಬ. ತನ್ನ ಮಾಳದ ವ್ಯಾಪ್ತಿಯಲ್ಲಿ ಸಿಕ್ಕ ಪ್ರಾಣಿ ತನ್ನ ಆಹಾರ ಎಂಬುದು ರೆಡ್ಡೇಶ್ವರನ ತಿಳುವಳಿಕೆ ಇರಬಹುದು. ಅಥವಾ ಎಮ್ಮೆಗಳಿಗಾಗಿ ಇರುವ ಹುಲ್ಲು ಮಾಳಕ್ಕೆ ಕುರಿಗಳು ಬಂದದ್ದರ ಕುರಿತು ಸಿಟ್ಟೂ ಇರಬಹುದು. ಮ್ಹಾಕುಬಾಯಿ ಮತ್ತು ರೆಡ್ಡೇಶ್ವರನ ಕತೆ ಮಹಿಷಾಸುರ ಮತ್ತು ಚಾಮುಂಡೇಶ್ವರಿಯ ಕತೆಯನ್ನು ನೆನಪಿಸುತ್ತದೆ. ಪೂನಾ- ಸೊಲ್ಲಾಪುರದ ಬಯಲುಗಳಲ್ಲಿ ಮ್ಹಶೋಬನೆಂಬ ಪಶುಪಾಲಕ ದೇವರ ಪ್ರಸ್ತಾಪವೂ ಪದೇ ಪದೇ ಬರುತ್ತದೆ. ಜೊತೆಗೆ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡಿನ ಅನೇಕ ಭಾಗಗಳಲ್ಲಿ ವ್ಯಾಪಿಸಿಕೊಂಡಿರುವ ‘ಪೋತರಾಜು’ಸಂಸ್ಕೃತಿಯು ಎಮ್ಮೆ ಸಂಸ್ಕೃತಿಯ ಪ್ರಧಾನ ನೆರಳು. ಈ ಪೋತರಾಜು ಎಂಬ ದೇವರು ಕಾಳಿಯ ಸೋದರ ಎಂದೂ ಕರೆಯಲಾಗುತ್ತದೆ.

ಎಮ್ಮೆ, ಹಸು ಮತ್ತು ಕುರಿಗಳನ್ನು ಸಾಕುವ ಬುಡಕಟ್ಟುಗಳು ತಮ್ಮ ವಿಕಾಸದ ಹಾದಿಯಲ್ಲಿ ಭೀಕರ ಸಂಘರ್ಷಗಳನ್ನು ಮಾಡಿಕೊಂಡಿವೆ. ಕಾಡು ಮತ್ತು ಹುಲ್ಲುಗಾವಲು, ನೀರಿನ ತಾಣಗಳ ಮೇಲಿನ ಯಜಮಾನಿಕೆಗಾಗಿ ಅಪಾರ ಸಾವು-ನೋವುಗಳು ಸಂಭವಿಸಿವೆ. ಮರುಭೂಮಿ ಸಂಸ್ಕೃತಿಗಳಲ್ಲಿ ಓಯಸಿಸ್ಸುಗಳಿಗಾಗಿ ಕಡಿಮೆ ಸಂಘರ್ಷ ನಡೆದಿಲ್ಲ. ಜುಂಜಪ್ಪನ ಕಾವ್ಯದಲ್ಲೂ ನೀರಿಗಾಗಿ ಹಲವು ಸಂಘರ್ಷಗಳು ನಡೆದಿವೆ. ಪಶು ಸಂಪತ್ತಿಗೆ ಅವಶ್ಯವಾಗಿ ಬೇಕಾದ ಮೇವು ಮತ್ತು ನೀರುಗಳ ಮೇಲಿನ ನಿಯಂತ್ರಣ ಯಾವುದೇ ಸಾಮ್ರಾಜ್ಯದ ಮೇಲಿನ ನಿಯಂತ್ರಣಕ್ಕಿಂತ ಕಡಿಮೆ ಅಲ್ಲ. ಬರ, ಪ್ರವಾಹ, ರೋಗ ರುಜಿನಗಳು, ಪಶುಗಳ ಸಂಖ್ಯೆ ಹೆಚ್ಚಾಗುವುದು ಮುಂತಾದ ಕಾರಣಗಳಿಗಾಗಿ ಮನುಷ್ಯರ ವಲಸೆಗಳು ಮತ್ತು ನಾಗರಿಕತೆಗಳ ವಿಕಾಸಗಳು ನಡೆದಿವೆ. ಲೆವಾಂಟ್ ಮತ್ತು ಸ್ಟೆಪ್ಪಿ ಪ್ರದೇಶಗಳಿಂದ ಪ್ರಾರಂಭವಾದ ಪಶುಪಾಲಕರು ಮತ್ತು ಕೃಷಿಕರ ವಲಸೆಗಳು ಜಗತ್ತಿನ ನಾಗರಿಕತೆಯ ನಿರ್ಣಾಯಕ ಘಟ್ಟಗಳೆಂದು ಕರೆಯಲಾಗುತ್ತದೆ. ಈಗಲೂ ಎಮ್ಮೆ ಮೇಯುವ ಜಾಗಗಳಿಗೆ ಕುರಿಗಳು ಬಂದರೆ ಎರಡೂ ಕಡೆಯವರಿಗೆ ಸಂಘರ್ಷಗಳಾಗುತ್ತಲೇ ಇರುತ್ತವೆ. ಕುರಿಗಳು ಬುಡ ಸಮೇತ ಮೇಯುವುದರಿಂದ ಎಮ್ಮೆ, ಹಸುಗಳಿಗೆ ಹುಲ್ಲು ಸಿಗುವುದಿಲ್ಲ ಎಂಬುದು ಅವರ ಆರೋಪವಾಗಿರುತ್ತದೆ. ಈ ವಾದವನ್ನು ಮುಂದಿಟ್ಟು ಹೊಡೆದಾಡಿಕೊಂಡಿರುವ ಅನೇಕ ಘಟನೆಗಳನ್ನು ಪ್ರತಿ ಋತುವಿನಲ್ಲೂ ಕೇಳುತ್ತಲೇ ಇರುತ್ತೇವೆ.

 ಎಮ್ಮೆ ನೆಲಸು ನಾಡಿನ ನೀರು ಬಯಸುವ, ಸಮೃದ್ಧ ಹುಲ್ಲು ಬಯಸುವ ಪ್ರಾಣಿ. ವಲಸೆಗಳಿಗೆ ಹೇಳಿ ಮಾಡಿಸಿದ್ದಲ್ಲ. ಕುರಿ, ಮೇಕೆ, ಹಸುಗಳನ್ನು ಸಾವಿರಾರು ಮೈಲುಗಳನ್ನು ಓಡಾಡಿಸಬಹುದು. ಆದರೆ ಎಮ್ಮೆಗಳನ್ನು ಹಾಗೆ ಓಡಾಡಿಸಲಾಗದು. ಎಮ್ಮೆಗಳ ಬಹುಪಾಲು ನೆಲೆಗಳು ಪಶ್ಚಿಮ, ವಾಯುವ್ಯ, ಈಶಾನ್ಯ ಭಾರತಗಳಲ್ಲಿ ಹಾಗೂ ಕೃಷ್ಣಾ, ಗೋದಾವರಿ, ತುಂಗಭದ್ರಾದಂತಹ ನದಿ ಬಯಲುಗಳಲ್ಲಿ ನೋಡಬಹುದು. ಸಿಂಧೂವಿನ ಉಪನದಿಗಳ ಹೆಸರುಗಳಲ್ಲಿ ಎಮ್ಮೆ ತಳಿಗಳಿವೆ. ಅದಾದ ನಂತರ ಮುರ್ರಾ ಮುಂತಾದ ತಳಿಗಳು ನರ್ಮದಾ ಬಯಲುಗಳಲ್ಲಿವೆ. ಭೀಮಾ, ಚಂದ್ರಭಾಗ ನದಿ ತೀರಗಳಲ್ಲಿ ಪಂಡರಾಪುರಿ ಎಂಬ ತಳಿ ಇದೆ. ನಾಗಪುರದ ನಾಗಾ ನದಿಯ ತೀರಗಳಲ್ಲಿ ಭಡಾವರಿ ತಳಿಯ ಎಮ್ಮೆಗಳನ್ನು ಸಾಕುತ್ತಾರೆ.

 ಮೊದಲು ಎಮ್ಮೆ ಪಳಗಿಸಿದವರು ಯಾರು? ಭಾರತ- ಚೀನಾ ಹಕ್ಕು ಪ್ರತಿಪಾದನೆ

 ತಳಿ ಶಾಸ್ತ್ರದ ಪ್ರಕಾರ ನೀರು ಎಮ್ಮೆಗಳು (ವಾಟರ್ ಬಫೆಲೊ) ಮತ್ತು ಜೌಗು ಭೂಮಿಯ ಎಮ್ಮೆಗಳು (ಸ್ವಾಂಪ್ ಬಫೆಲೊ) ಎಂದು ಎರಡು ಮುಖ್ಯ ಪ್ರಭೇದಗಳಿವೆ. ನೀರೆಮ್ಮೆಗಳ ಮೂಲ ಸ್ಥಾನ ಸಿಂಧೂ ತೀರ. ಜೌಗು ಎಮ್ಮೆಗಳ (ಬ್ಯಾಬುಲಿಸ್ ಆರ್ನಿ) ನೆಲೆ ಅಸ್ಸಾಮಿನಿಂದ ಚೀನಾದ ಯಾಂಗ್ಝಿ ನದಿ ಮುಖಜ ಭೂಮಿಗಳವರೆಗೆ ವಿಸ್ತರಿಸಿಕೊಂಡಿದೆ. ಈ ಎರಡೂ ತಳಿಗಳು ಸುಮಾರು 6,000 ವರ್ಷಗಳ ಹಿಂದೆ ಮುಖಾಮುಖಿಯಾಗಿ ಮಿಶ್ರಣಗೊಂಡಿವೆ. ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ ಈ ಎಮ್ಮೆಗಳನ್ನು ಮನುಷ್ಯರು ಪಳಗಿಸಿ ತಮ್ಮ ನೆಲೆವಾಸಗಳಿಗೆ ಕರೆ ತಂದಿದ್ದಾರೆ. ಯಾರು ಮೊದಲು ಪಳಗಿಸಿದ್ದು, ಸಾಕಿದ್ದು ಎಂಬುದರ ಬಗ್ಗೆ ಚೀನಾ ಮತ್ತು ಭಾರತದ ವಿಜ್ಞಾನಿಗಳ, ಪುರಾತತ್ವ ಶಾಸ್ತ್ರಜ್ಞರ ನಡುವೆ ಎದ್ದಿರುವ ವಿವಾದಗಳು ಇನ್ನೂ ಬಗೆ ಹರಿದಿಲ್ಲ. ಚೀನಾ ವಿಜ್ಞಾನಿಗಳು ಯಾಂಗ್ಝಿ ನದಿ ತೀರಗಳಲ್ಲಿ ಸುಮಾರು 6 ರಿಂದ 7 ಸಾವಿರ ವರ್ಷಗಳ ನಡುವೆ ಎಮ್ಮೆಗಳನ್ನು ಸಾಕಿರುವ ಅವಶೇಷಗಳನ್ನು ಮುಂದಿಡುತ್ತಾರೆ. ಅದೇ ಸಂದರ್ಭದಲ್ಲಿ ಎಸ್.ಕುಮಾರ್, ಕೆ. ತಾಮುರ ಮುಂತಾದ ವಿಜ್ಞಾನಿಗಳು ವಾಟರ್ ಬಫೆಲೊ ಬ್ಯಾಬುಲಸ್ ಬ್ಯಾಬುಲಿಸ್ ಉಪಖಂಡದಲ್ಲಿ ವಿಕಾಸವಾಗಿರುವ ದಾಖಲೆಗಳನ್ನು ಮುಂದಿಡುತ್ತಾರೆ. ಕಾಸರಗೋಡಿನ ಕೇಂದ್ರೀಯ ವಿವಿಯ ವಿಜ್ಞಾನಿಗಳು ಮತ್ತು ಹೈದರಾಬಾದಿನ ಸಿಸಿಎಂಬಿಯ ವಿಜ್ಞಾನಿಗಳು ಸುಮಾರು 400 ಕ್ಕೂ ಹೆಚ್ಚಿನ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿ ಉಪಖಂಡದಲ್ಲಿ ಎಮ್ಮೆ ಸಾಕಾಣಿಕೆಯ ನಕಾಶೆಯನ್ನು ರೂಪಿಸಿದ್ದಾರೆ. ಕನ್ನಡದವರೇ ಆದ ಪ್ರಖ್ಯಾತ ಪುರಾತತ್ವಶಸ್ತ್ರಜ್ಞ ಡಾ. ರವಿ ಕೋರಿ ಶೆಟ್ಟರ್ ಅವರ ‘ಏನ್ಷಿಯಂಟ್ ಅಗ್ರಿಕಲ್ಚರ್ ಇನ್ ದ ಇಂಡಿಯನ್ ಸಬ್ ಕಾಂಟಿನೆಂಟ್’ ಎಂಬ ಬರಹದಲ್ಲಿ ಹಸು, ಎಮ್ಮೆಗಳ ಸಾಕಾಣಿಕೆ ಕುರಿತು ಮೆಹರ್ ಗಡ (ಇಂದಿನ ಪಾಕಿಸ್ತಾನ) ನಿವೇಶನಗಳಲ್ಲಿ ಸಿಕ್ಕಿರುವ ಅವಶೇಷಗಳ ಕುರಿತು ಪ್ರಸ್ತಾಪಿಸಿದ್ದಾರೆ. ಮೆಹರ್‌ಗಡ ಹಸಿ ಇಟ್ಟಿಗೆಯ ನಾಗರಿಕತೆ. ಸುಮಾರು 9,500 ವರ್ಷಗಳ ಹಿಂದಿನಿಂದಲೇ ಇಲ್ಲಿ ಕಟ್ಟಡಗಳನ್ನು ಕಟ್ಟಿ ವಾಸಿಸಿದ್ದರ ಕುರುಹುಗಳಿವೆ. ಅದರ ನಂತರ 5,500 ವರ್ಷಗಳ ಹಿಂದೆ ವಿಕಾಸದ ತುದಿಗೆ ಏರಿದ ಸಿಂಧೂ ಕಣಿವೆಯಲ್ಲಿ ಎಮ್ಮೆಗಳ ಸಾಕಾಣಿಕೆ ಮತ್ತು ಬಳಕೆ ವ್ಯಾಪಕವಾಗಿರುವ ಅಸಂಖ್ಯ ದಾಖಲೆಗಳಿವೆ. ಸುಮಾರು 4,500 ವರ್ಷಗಳ ಹಿಂದೆ ಪಶುಪತಿಯನ್ನು ಹೋಲುವ ದೇವರಿಗೆ ಎಮ್ಮೆ ಬಲಿ ನೀಡುತ್ತಿರುವ ಟೆರ್ರಾಕೋಟ ಚಿತ್ರಗಳು ದೊರೆತಿವೆ. ಈ ಎಮ್ಮೆಗಳನ್ನು ಸಿಂಧೂ ತೀರದ ಜನರು ಸಮುದ್ರ ಮಾರ್ಗದ ಮೂಲಕ ಈಜಿಪ್ಟಿಗೆ, ಇರಾನಿನ ಭಾಗಗಳಿಗೆ ಸಾಗಿಸಿದ್ದಾರೆ ಎನ್ನಲಾಗುತ್ತದೆ. ಭಾರತದಲ್ಲಿ ಇಂದು ಸುಮಾರು 10 ಕೋಟಿ ಎಮ್ಮೆಗಳಿವೆ. ಪಾಕಿಸ್ತಾನದಲ್ಲಿ 2.6 ಕೋಟಿ, ಈಜಿಪ್ಟಿನಲ್ಲಿ ಸುಮಾರು 40 ಲಕ್ಷ ಎಮ್ಮೆಗಳಿವೆ. ಈ ನೀರೆಮ್ಮೆಗಳಿಂದಲೇ ಸುಮಾರು ಶೇ.92 ರಷ್ಟು ಹಾಲು ಸಂಗ್ರಹಿಸಲಾಗುತ್ತಿದೆ. ಉಳಿದ ಶೇ.2 ರಷ್ಟು ಮಾತ್ರ ಜೌಗೆಮ್ಮೆಗಳು (ಬ್ಯಾಬುಲಸ್ ಆರ್ನಿ) ಮತ್ತಿತರ ತಳಿಗಳದು.

ಕಾಂಚಾ ಐಲಯ್ಯ ಶೆಫರ್ಡ್ ಅವರು ತಮ್ಮದೊಂದು ಪುಸ್ತಕಕ್ಕೆ ‘ಬಫೆಲೊ ನ್ಯಾಶಲಿಸಂ’ ಎಂದು ಹೆಸರಿಟ್ಟಿದ್ದಾರೆ. ಅದರ ಶೀರ್ಷಿಕೆಯೇ ಓದುಗರನ್ನು ಸೆಳೆಯುತ್ತದೆ. ಆದರೆ ಇಡೀ ಪುಸ್ತಕದಲ್ಲಿ ಎಮ್ಮೆಯ ಪ್ರಸ್ತಾಪ, ಅದರ ಚರಿತ್ರೆ ಮುಂತಾದ ವಿವರಗಳೇನೂ ಇಲ್ಲ. ಆರ್ಯ-ದ್ರಾವಿಡ ಸಂಘರ್ಷವನ್ನು ಹಸು ಎಮ್ಮೆಗಳ ನೆಲೆಯಲ್ಲಿ ಗಮನಿಸುತ್ತಾರೆ.ಹಸು ಬಿಳಿ ಬಣ್ಣದ ಮತ್ತು ಎಮ್ಮೆಯನ್ನು ಕಪ್ಪು ಬಣ್ಣದ ರೂಪಕವಾಗಿಸಿ ಜನಾಂಗಿಕ ರಾಜಕೀಯವನ್ನು ವಿವರಿಸಲು ಪ್ರಯತ್ನಿಸಿದ್ದಾರೆ. ಈ ಕೃತಿಯ ಕೆಲವು ಬರಹಗಳ ಧಾಟಿಯೂ ತುಸು ಮಟ್ಟಿಗೆ ಡಿ.ಎನ್. ಝಾ ಅವರ ‘ಹೋಲಿ ಕೌ’ ಕೃತಿಗೆ ಹೋಲುತ್ತದೆ. ಈ ಕೃತಿಗಳ ಪ್ರಧಾನ ಪಾತಳಿಯು ಆರ್ಯರು ದಾಳಿ ಮಾಡಿದರು ಎಂಬ ನೆಲೆಗಟ್ಟಿನ ಮೇಲೆ ನಿಂತಿದೆ. ತಳಿ ವಿಜ್ಞಾನ ಇದನ್ನು ವಲಸೆಯ ವಿಚಾರವಾಗಿ ನೋಡುತ್ತದೆ. ಜೊತೆಗೆ ಜನರು ತಾವು ಪವಿತ್ರವೆಂದು ಭಾವಿಸುವ ಪ್ರಾಣಿಗಳನ್ನು ಪವಿತ್ರ ಉದ್ದೇಶಗಳಿಗೆ ಬಲಿ ಕೊಡುತ್ತಿದ್ದರುಎಂಬ ಅಂಶವನ್ನು ಈ ಕೃತಿಗಳಲ್ಲೂ ಪ್ರಸ್ತಾಪಿಸಲಾಗಿದೆ. ಅದೇನು ಹೊಸ ವಿಚಾರವಲ್ಲ. ಸಿಂಧೂ ಮತ್ತು ಮೆಸಪೊಟೇಮಿಯಾ, ಈಜಿಪ್ಟಿನ ಸಂಸ್ಕೃತಿಗಳಲ್ಲಿ ರಾಶಿ ರಾಶಿ ಪ್ರಸ್ತಾಪಗಳಿವೆ.

ಮಹಾಭಾರತದಲ್ಲಿ ಎಮ್ಮೆ ಬುಡಕಟ್ಟುಗಳು

ಭಾರತದ ಪ್ರಮುಖ ಜನಾಂಗ ಶಾಸ್ತ್ರಜ್ಞರಾದ ಕೆ.ಸಿ.ಮಿಶ್ರಾ 1987ರಲ್ಲಿ ‘ಟ್ರೈಬ್ಸ್ ಇನ್‌ದ ಮಹಾಭಾರತ’ ಎಂಬ ಪ್ರಮುಖ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯಲ್ಲಿ ಮಹಾಭಾರತದ ಮತ್ತು ಆ ಕಾಲಘಟ್ಟಕ್ಕೆ ಸೇರಿದ 363 ಬುಡಕಟ್ಟುಗಳ ಕಿರು ಟಿಪ್ಪಣಿಗಳಿವೆ. ಇದರಲ್ಲಿ ಸುಮಾರು 17ಕ್ಕೂಹೆಚ್ಚು ಯಾದವ (ಹಸು)ಸಂಬಂಧಿ ಬುಡಕಟ್ಟುಗಳು ಮತ್ತು 3 ಪ್ರಮುಖ ಎಮ್ಮೆ ಬುಡಕಟ್ಟುಗಳ ಪ್ರಸ್ತಾಪವಿದೆ. ಭಾಷೆ, ವೃತ್ತಿಗಳು, ಪ್ರದೇಶಗಳು, ಪ್ರಾಣಿಗಳು ಮುಂತಾದವುಗಳ ಆಧಾರದ ಮೇಲೆ ಬುಡಕಟ್ಟುಗಳ ಹೆಸರುಗಳಿವೆ. ಎಮ್ಮೆ ಬುಡಕಟ್ಟುಗಳಲ್ಲಿ ಮುಷಕ್ಹಾ, ಮಹಿಷಕರ್ಷಿಕ್ಹಾ ಮತ್ತು, ಮಾಹಿಷ್ಮತಿಗಳು ಪ್ರಮುಖವಾದವು.

 ಮಹಿಷಕರ್ಷಿಕ್ಹಾ; ಎಮ್ಮೆ ಸಾಕುವ ಈ ಬುಡಕಟ್ಟಿನ ಜನರು ಮಲ್ಲ, ಸುದೇಶ್ಣ ಮತ್ತು ಪ್ರಹೂತ ಪ್ರದೇಶಗಳಲ್ಲಿದ್ದರು ಎಂಬ ಪ್ರಸ್ತಾಪಗಳಿವೆ. ಮಧ್ಯ ಭಾರತದಿಂದ ದಕ್ಷಿಣಕ್ಕೆ ವಿಶೇಷವಾಗಿ ಕರ್ನಾಟಕ, ಹೈದ ರಾಬಾದಿನ ಭಾಗಗಳಲ್ಲಿ ವಾಸಿಸುತ್ತಿದ್ದ ಜನ ಇವರು. ಬಹಳ ಹಿಂದೆ ಮಾಹಿಷ್ಮತಿಯಲ್ಲೂ ಜೀವಿಸಿದ್ದಿರಬಹುದು ಎಂದು ಹೇಳಲಾಗುತ್ತದೆ. ಮಹೀಷಕ್ಹ, ಮಹೀಷಕ ವಿಶಯ, ಮಹಿಷ ಮಂಡಲದವರು ಎಂದು ಕರೆಯುವುದು ಇವರನ್ನೆ. ಕೋಣಗಳ ಮೂಲಕ ಹೊಲ ಗದ್ದೆ ಉಳುವ, ಎಮ್ಮೆ ಮೇಯಿಸುವ ಇವರ ಕುರಿತು ವ್ಯಾಪಕ ಪ್ರಸ್ತಾಪಗಳಿವೆ.

 ಮಾಹಿಷ್ಮತಿ; ಮಹಾಭಾರತದಲ್ಲಿ ಹೈಹಯ (ಯಾದವ) ರಾಜ ನೀಲನು ಆಡಳಿತ ಮಾಡುತ್ತಿದ್ದ ವಿವರಗಳಿವೆ. ಇದು ನರ್ಮದಾ ನದಿಯ ಒಂದು ದ್ವೀಪದ ಹೆಸರು. ಈ ನೀಲನನ್ನು ಕರ್ಣನು ಸೋಲಿಸುತ್ತಾನೆ. ಆನಂತರ ಸಹದೇವನು ಗೆಲ್ಲುತ್ತಾನೆ. ಕುರುಕ್ಷೇತ್ರ ಯುದ್ಧದಲ್ಲಿ ಈ ನೀಲನು ಕೌರವರ ಕಡೆ ನಿಂತು ಯುದ್ಧ ಮಾಡುತ್ತಾನೆ. ಮಾಂಧಾತನಗರವೆಂತಲೂ ಕರೆಯಲಾಗುವ ಇದನ್ನು ಮುಚಕುಂದ ಎಂಬ ಇಕ್ಷ್ವಾಕು ವಂಶದವನು ಸ್ಥಾಪಿಸುತ್ತಾನೆ. ಮಾಹಿಷ್ಮತಿಯ ಎಮ್ಮೆ ಸಾಕುವ ಜನರು ನಿಧಾನಕ್ಕೆ ದಕ್ಷಿಣ ಮಹಾರಾಷ್ಟ್ರ, ಕರ್ನಾಟಕದ ಕುಂತಲ ಪ್ರದೇಶದ ಕಡೆ ಬಂದಿರಬಹುದು.

 ಮುಷಕ್ಹಾ:  ಕೇರಳ, ತಮಿಳುನಾಡು, ಹೈದರಾಬಾದ್ ಮುಂತಾದ ಕಡೆ ಈ ಜನರು ಈಗಲೂ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಕೃಷ್ಣೆಯ ಉಪನದಿಯಾದ ಮೂಷಿಯಿಂದ ಈ ಹೆಸರು ಬಂದಿರಬಹುದು. ಮುಷಕ್ಹಾ ಮಲಬಾರಿನ ಪ್ರಮುಖ ಬುಡಕಟ್ಟುಗಳಲ್ಲೊಂದು. ಆದರೆ ಅತ್ಯಂತ ಆಸಕ್ತಿಯ ಸಂಗತಿ ಎಂದರೆ ಈ ಬುಡಕಟ್ಟು ಸಿಂಧ್ ಪ್ರದೇಶದಲ್ಲೂ ವಾಸಿಸಿದ್ದ ದಾಖಲೆಗಳಿವೆ. ಅಲೆಕ್ಸಾಂಡರನ ಚರಿತ್ರಕಾರರು ಹೇಳುವಂತೆ ಮುಷಿಕಾನೂರು ಎಂಬುದು ಸಿಂಧ್ ಪ್ರದೇಶದಲ್ಲಿತ್ತು. ಪಶ್ಚಿಮದ ಪ್ರಮುಖ ವ್ಯಾಪಾರಿ ಮಾರ್ಗಗಳಲ್ಲಿ ಈ ಮುಷಿಕಾಪಥ ಅಥವಾ ಕೆಂಪು ಪಥ ಚರಿತ್ರೆಯ ಅನೇಕ ದುರಂತ ಗೀತೆಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡಿದೆ. ಸಿಂಧ್ ಪ್ರದೇಶದ ಪ್ರಮುಖ ಎಮ್ಮೆ ಬುಡಕಟ್ಟಾಗಿದ್ದ ಈ ಮುಷಕ್ಹಾವು ಹಲವು ಚಾರಿತ್ರಿಕ ಮತ್ತು ಜನಾಂಗಿಕ ಒತ್ತಡಗಳಿಂದಾಗಿ ದಕ್ಷಿಣದ ಕಡೆಗೆ ಸರಿದಂತೆ ಕಾಣುತ್ತದೆ. ಈ ಬುಡಕಟ್ಟಿನ ಕವಲೇ ನೀಲಗಿರಿ ಬೆಟ್ಟಗಳ ತೋಡರಿರಬಹುದು ಎಂಬ ಸಂದೇಹವೊಂದನ್ನು ಹುಟ್ಟಿ ಹಾಕುತ್ತದೆ. ತಳಿ ಶಾಸ್ತ್ರದ ಅಧ್ಯಯನಗಳೂ ಇದನ್ನೇ ಸಮರ್ಥಿಸುತ್ತವೆ.

ಎಮ್ಮೆ ನಾಗರಿಕತೆಯು ಸಿಂಧೂ, ನರ್ಮದಾ, ಕೃಷ್ಣಾ, ಚಂದ್ರಭಾಗ, ಕಾವೇರಿ ನದಿ ಜಲಾನಯನ ಪ್ರದೇಶಗಳಲ್ಲಿ ವಿಕಾಸವಾಗಿದೆ. ಈಶಾನ್ಯ ಭಾರತದ ಬ್ರಹ್ಮಪುತ್ರ ನದಿಯ ಜಲಾನಯನ ಪ್ರದೇಶದಲ್ಲಿ ಜೌಗೆಮ್ಮೆಗಳು ವಿಕಾಸವಾಗಿವೆ. ಆ ಬುಡಕಟ್ಟುಗಳ ಕುರಿತ ಮಾಹಿತಿ ಮಹಾಭಾರತ ಮತ್ತು ಆ ನಂತರದ ಕೃತಿಗಳಲ್ಲಿ ಕಾಣುವುದಿಲ್ಲ. ನೇಪಾಳ ಮತ್ತು ಅದರ ಅಕ್ಕ ಪಕ್ಕದ ಭಾಗಗಳಲ್ಲಿ ಈಗಲೂ ವ್ಯಾಪಕವಾಗಿರುವ ಪ್ರಾಣಿ ಬಲಿಯಲ್ಲಿ ಎಮ್ಮೆಯೇ ಪ್ರಧಾನ. ಆದರೆ ಪುರಾಣದ ಕೃತಿಗಳಲ್ಲಿ ಯಾಕೆ ಪ್ರವೇಶ ಪಡೆಯಲಿಲ್ಲವೋ ಅಧ್ಯಯನ ಮಾಡಬೇಕು.

ಆದರೆ ಇಡೀ ಪಶ್ಚಿಮ ಭಾರತದಲ್ಲಿ ಮೇಲೆ ವಿವರಿಸಿದ ನಾಲ್ಕೈದು ಪ್ರದೇಶಗಳಲ್ಲಿ ಎಮ್ಮೆ ಬುಡಕಟ್ಟುಗಳು ಮತ್ತು ಹಸು, ಕುರಿ ಬುಡಕಟ್ಟುಗಳಿಗೂ ಸಂಘರ್ಷ ನಡೆದ ಹಾಗೆ ಕಾಣುತ್ತದೆ. ವಲಸೆಗೆ ಸೂಕ್ತವಲ್ಲದ, ಹೆಚ್ಚು ನೀರು ಬಯಸುವ, ನೆಲಸು ನಾಡುಗಳಿಗೆ ಹೇಳಿ ಮಾಡಿಸಿದ ಎಮ್ಮೆಯ ಮೇವಿನ ಕ್ಷೇತ್ರಗಳಾದ ಕಾವಲು, ಕಾನೆಗಳ ಮೇಲೆ ಬೇರು ಸಮೇತ ಬೋಳಿಸುವಂತೆ ಮೇಯ್ದು ಹೊರಡುವ ಕುರಿಗಳು ದೊಡ್ಡ ಸವಾಲಾಗಿರಬಹುದು. ಈ ಮೇವಿಗಾಗಿ ನಡೆದ ಸಂಘರ್ಷಗಳು ಮನುಷ್ಯರ ಚರಿತ್ರೆಯನ್ನು ಹೇಗೆ ಬದಲಿಸಿದವು. ಮಹಾ ನಾಗರಿಕತೆಗಳನ್ನು ಕಟ್ಟಿ ಬೆಳೆಸಿದ ಜನರ ವಾರಸುದಾರರು ಇಂದು ಅವಸಾನದ ಅಂಚಿನಲ್ಲಿ ತುತ್ತು ಊಟಕ್ಕೆ ಪರದಾಡುತ್ತ ಕಾಡುಮೇಡುಗಳಲ್ಲಿ ಅಲೆವ ದಾರುಣ ಸ್ಥಿತಿಯಲ್ಲಿದ್ದಾರೆ. ತೋಡರು, ಇರುಳಿಗರು, ಸೋಲಿಗರು, ಕುರ್ದಿಗಳು, ಯಾಜಿದಿಗಳು, ಬಲೂಚಿಗಳು ಒಬ್ಬರೇ ಇಬ್ಬರೆ? ರಾಜಕೀಯಾಧಿಕಾರವಿಲ್ಲದೆ ಹೋದರೆ, ಸಂಪತ್ತಿನ ಮೇಲೆ ಯಜಮಾನಿಕೆ ಹೋದರೆ ಬಂದು ಆವರಿಸಿಕೊಳ್ಳುವ ಭೀಕರ ವಿಸ್ಮತಿಯು ಉಂಟು ಮಾಡುವ ಪರಿಣಾಮ ಮಾತ್ರ ಆತ್ಮಹತ್ಯಾತ್ಮಕವಾಗಿರುತ್ತದೆ. ಗೆದ್ದವರು ಮತ್ತು ಆಳುವವರು ಮಾಡುವ ಮೊದಲ ಕೆಲಸ ಅನ್ನದ ತಾವುಗಳನ್ನು ಕಿತ್ತುಕೊಳ್ಳುವುದು ನಂತರ ನೆನಪುಗಳ ಕೋಶಗಳನ್ನು ನಾಶ ಮಾಡುವುದು. ಭಾರತದ ಬುಡಕಟ್ಟು ಮತ್ತು ಜಾತಿಗಳ ಬಲಾಢ್ಯತೆ ಮತ್ತುದಾರುಣತೆಯನ್ನು ನೋಡಿದರೆ ಈ ಸಂಗತಿ ಅರ್ಥವಾಗುತ್ತದೆ. ಮೂಲವೃತ್ತಿಗಳಿಗೆ ಅಂಟಿಕೊಂಡವರು ಗದ್ದುಗೆಯನ್ನು ಕಳೆದುಕೊಂಡಿದ್ದಾರೆ. ನಿರಂತರವಾಗಿ ವೃತ್ತಿಗಳನ್ನು ಬದಲಾಯಿಸಿಕೊಂಡವರು ಗದ್ದುಗೆಗಳ ಮೇಲೆ ಒಡೆತನ ಸಾಧಿಸಿದ್ದಾರೆ. ಸೋತವರು ಹೊಸ ಗದ್ದುಗೆಗಳನ್ನು ಸ್ಥಾಪಿಸುವ ಕೆಲಸ ಮಾಡಿದ್ದಾರೆ. ಅವುಗಳಲ್ಲಿ ಕೆಲವಕ್ಕೆ ಮಾನ್ಯತೆ ಸಿಕ್ಕಿದೆ, ಕೆಲವು ಅಸಡ್ಡೆಗಳಿಗೆ ಒಳಗಾಗಿವೆ.ಹಸು, ಕುದುರೆಗಳ ಹಿಂದೆ ಬಂದ ಸ್ಟೆಪ್ಪಿಜನರು ಅತ್ಯಂತ ವೇಗವಾಗಿ ಗಂಗಾ- ನರ್ಮದಾ, ಸರಸ್ವತಿ ನದಿ ಬಯಲುಗಳಲ್ಲಿ ಕೃಷಿಗೆ ಇಳಿದರು. ಹರಿವ ನೀರಿಗೆ ಅಡ್ಡ ಕಟ್ಟಿದವರ ವಿರುದ್ಧ ನಿಂತ, ಪಶುಪಾಲನೆಗೆ ಕೃಷಿಯು, ನಗರಗಳು ಅಡ್ಡಿ, ಮೈಲಿಗೆ ಸಂಪ್ರದಾಯ ವಿರೋಧಿ ಎಂದು ಹೇಳಿದ ಜನರೇ ನಿಧಾನವಾಗಿ ಪಶುಪಾಲನೆ ತೊರೆದರು. ಸ್ಥಳೀಯ ಹೆಂಗಸರೊಂದಿಗೆ ಬೆರೆತರು, ನಗರಗಳನ್ನು ಕಟ್ಟಿದರು, ಅಶ್ವಮೇಧ ಯಾಗ, ರಾಜಸೂಯ ಯಾಗಗಳನ್ನು ಮಾಡಿದರು ಸಾಮ್ರಾಜ್ಯಗಳನ್ನು ಕಟ್ಟಿದರು. ಸಂಘರ್ಷದಲ್ಲಿ ಸೋತವರು ನಗರಗಳನ್ನು, ಗದ್ದುಗೆಗಳನ್ನು ಬಿಟ್ಟು ಕುರಿ, ಮೇಕೆ, ಹಸು, ಎಮ್ಮೆಗಳ ಬಾಲ ಹಿಡಿದುಕೊಂಡು ದಕ್ಷಿಣದ ಕಡೆ ಹೊರಟರು. ದಕ್ಷಿಣಕ್ಕೆ ಬಂದು ಸಂಪದ್ಭರಿತ ಸಂಸ್ಕೃತಿಗಳನ್ನು ಕಟ್ಟಿ ಬೆಳೆಸಿದರು. ಪಲ್ಲವರು ತಮ್ಮ ನಾಣ್ಯಗಳ ಮೇಲೆ ಕೋಣಗಳ ಚಿತ್ರವನ್ನು ಟಂಕಿಸಿದ್ದಾರೆ. ಸ್ಟೆಪ್ಪಿಮೂಲದ ಜನರು ಎಮ್ಮೆಗಳನ್ನು ಮೃತ್ಯುಸಂಕೇತವಾಗಿ, ಕಪ್ಪು ವರ್ಣದ ಸಂಕೇತವಾಗಿ ಬಿಂಬಿಸುತ್ತಾರೆ. ಆದರೆ ದಕ್ಷಿಣದಲ್ಲಿ ಅದನ್ನು ಪವಿತ್ರ ಪ್ರಾಣಿಯಾಗಿ ಗ್ರಹಿಸಲಾಗಿದೆ.

( ಮುಂದುವರಿಯುವುದು)

share
ಡಾ.ನೆಲ್ಲುಕುಂಟೆ ವೆಂಕಟೇಶ್
ಡಾ.ನೆಲ್ಲುಕುಂಟೆ ವೆಂಕಟೇಶ್
Next Story
X