‘ಡಿಜಿಟಲ್ ವಿಭಜನೆ’ ನಿವಾರಿಸುವಂತೆ ಕೋರಿ ಸಿಜೆಐಯಿಂದ ಕಾನೂನು ಸಚಿವರಿಗೆ ಪತ್ರ

ಹೊಸದಿಲ್ಲಿ, ಜೂ. 26: ಗ್ರಾಮೀಣ, ಬುಡಕಟ್ಟು, ಕುಗ್ರಾಮ ಹಾಗೂ ಬೆಟ್ಟ ಪ್ರದೇಶಗಳಲ್ಲಿ ಡಿಜಿಟಲ್ ಸಂಪರ್ಕ ದುರ್ಬಲವಾಗಿದೆ. ಇದು ನ್ಯಾಯ ನೀಡುವ ಪ್ರಕ್ರಿಯೆ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ. ಆದುದರಿಂದ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ.
‘ಡಿಜಿಟಲ್ ವಿಭಜನೆ’ಯನ್ನು ಉಲ್ಲೇಖಿಸಿದ ಅವರು, ತಂತ್ರಜ್ಞಾನದ ಅಸಮಾನತೆ ಒಂದು ತಲೆಮಾರಿನ ವಕೀಲರನ್ನು ವ್ಯವಸ್ಥೆಯಿಂದ ಹೊರ ಹಾಕುತ್ತಿದೆ ಎಂದಿದ್ದಾರೆ. ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಅವರ ‘ಅನೋಮಲಿಸ್ ಇನ್ ಲಾ ಆ್ಯಂಡ್ ಜಸ್ಟಿಸ್’ ಪುಸ್ತಕವನ್ನು ಇಲ್ಲಿ ಆನ್ಲೈನ್ ಕಾರ್ಯಕಮದಲ್ಲಿ ಬಿಡುಗಡೆ ಮಾಡಿದ ಸಂದರ್ಭ ಅವರು ಈ ವಿಷಯ ಹೇಳಿದರು. ‘‘ಈ ವಿಷಯದ ಬಗ್ಗೆ ಕಾನೂನು ಸಚಿವ, ಸಂವಹನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಿಗೆ ಇತ್ತೀಚೆಗೆ ಪತ್ರ ಬರೆದಿದ್ದೇನೆ. ಡಿಜಿಟಲ್ ವಿಭಜನೆಯನ್ನು ನಿವಾರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ. ಅಲ್ಲದೆ, ಕೋವಿಡ್ ಸಾಂಕ್ರಾಮಿಕ ರೋಗದಿಂದ ಜೀವನಾಧಾರ ಕಳೆದುಕೊಂಡ ವಕೀಲರಿಗೆ ನೆರವು ನೀಡುವ ವ್ಯವಸ್ಥೆ ರೂಪಿಸುವಂತೆ ಕೂಡ ಮನವಿ ಮಾಡಿದ್ದೇನೆ’’ ಎಂದು ಎನ್.ವಿ. ರಮಣ ಹೇಳಿದರು. -





