ಉತ್ತರ ಪ್ರದೇಶ ಚುನಾವಣೆಗೆ ಮೊದಲು 50 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಸ್ಮಾರಕ ನಿರ್ಮಾಣಕ್ಕೆ ಬಿಜೆಪಿ ಯೋಜನೆ

ಲಕ್ನೋ: ರಾಜ್ಯದಲ್ಲಿ ದಲಿತ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರಕಾರ 2022 ರ ವಿಧಾನಸಭಾ ಚುನಾವಣೆಗೆ ಮೊದಲು ಸಂವಿಧಾನದ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ಭವ್ಯವಾದ ಸ್ಮಾರಕವನ್ನು ನಿರ್ಮಿಸಲು ಯೋಜಿಸುತ್ತಿದೆ ಎಂದು Times of India ವರದಿ ಮಾಡಿದೆ.
ಲಕ್ನೊದ ಐಶ್‌ಬಾಗ್‌ನಲ್ಲಿ ನಿರ್ಮಾಣವಾಗಲಿರುವ ಭಾರತ್ ರತ್ನ ಡಾ.ಭೀಮ್ ರಾವ್ ಅಂಬೇಡ್ಕರ್ ಸ್ಮಾರಕ ಹಾಗೂ ಸಾಂಸ್ಕೃತಿಕ ಕೇಂದ್ರಕ್ಕೆ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಜೂನ್ 28 ರಂದು ತಮ್ಮ ಲಕ್ನೊ ಭೇಟಿಯ ಸಂದರ್ಭದಲ್ಲಿ ಅಡಿಪಾಯ ಹಾಕಲಿದ್ದಾರೆ ಎಂದು ತಿಳಿದುಬಂದಿದೆ.
ಈ ಯೋಜನೆಗೆ ಸುಮಾರು 50 ಕೋಟಿ ರೂ. ವೆಚ್ಚವಾಗಲಿದೆ ಎಂದು ಮೂಲಗಳು ತಿಳಿಸಿವೆ ಮತ್ತು 45 ಮೀಟರ್ ಎತ್ತರದ ಅಂಬೇಡ್ಕರ್ ಅವರ ಪ್ರತಿಮೆಯನ್ನು ಒಳಗೊಂಡಿರುವ ಕೇಂದ್ರದ ಒಂದು ಭಾಗವನ್ನು ಡಿಸೆಂಬರ್ ಮೊದಲ ವಾರದಲ್ಲಿ ಪೂರ್ಣಗೊಳಿಸಬಹುದು. ಡಿಸೆಂಬರ್ 6 ಅಂಬೇಡ್ಕರ್ ಅವರ ಪುಣ್ಯತಿಥಿಯಂದು ಅದನ್ನು ಉದ್ಘಾಟಿಸಬಹುದು.
“ಇದು ಭವ್ಯವಾದ ಕಟ್ಟಡವಾಗಿದ್ದು, ಅಂಬೇಡ್ಕರ್ ಅವರ ಪ್ರತಿಮೆ, ಗ್ರಂಥಾಲಯ, ವಸ್ತುಸಂಗ್ರಹಾಲಯ, ಸಭಾಂಗಣ ಇತ್ಯಾದಿಗಳನ್ನು ನಿರ್ಮಿಸಲಾಗುತ್ತದೆ. ಪ್ರಸ್ತುತ ಯೋಜನೆಗಳ ಪ್ರಕಾರ, ಪ್ರತಿಮೆಯು 25 ಅಡಿ ಎತ್ತರವನ್ನು ಹೊಂದಿರುತ್ತದೆ. 20 ಅಡಿ ಎತ್ತರದ ಪೀಠದ ಮೇಲೆ ಇಡಲಾಗುತ್ತದೆ. ಸೆಮಿನಾರ್ ಗಳು, ನಾಟಕಗಳು ಸೇರಿದಂತೆ ವರ್ಷಪೂರ್ತಿ ಅಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಸಂಶೋಧನಾ ಉದ್ದೇಶಗಳಿಗಾಗಿ ವಿದ್ಯಾರ್ಥಿಗಳು ಇಲ್ಲಿ ಭೇಟಿ ಮಾಡಬಹುದು ”ಎಂದು ಸರಕಾರಿ ಅಧಿಕಾರಿಯೊಬ್ಬರು ಹೇಳಿದರು.
ಯೋಜಿಸಲಾಗಿರುವ ಗ್ರಂಥಾಲಯದಲ್ಲಿ ಅಂಬೇಡ್ಕರ್ ಅವರ ಪುಸ್ತಕಗಳು ಹಾಗೂ ಅವರ ಸ್ವಂತ ಬರಹಗಳನ್ನು ಒಳಗೊಂಡಂತೆ ಅಪಾರ ಡಿಜಿಟಲೀಕೃತ ಸಾಹಿತ್ಯವನ್ನು ಹೊಂದುವ ಸಾಧ್ಯತೆಯಿದೆ.
"ಡಿಸೆಂಬರ್ 6 ರೊಳಗೆ ಯೋಜನೆಯ ಭಾಗವನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು, ಅವರ ಪುಣ್ಯತಿಥಿ ಆಚರಿಸುವ ಅದ್ಧೂರಿ ಸಮಾರಂಭದಲ್ಲಿ ಸ್ಮಾರಕವನ್ನು ಉದ್ಘಾಟಿಸಬಹುದು. ಪ್ರಸ್ತುತ, ಮಣ್ಣಿನ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಯೋಜನೆಗಳ ಪ್ರಕಾರ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸೋಮವಾರ ಲಕ್ನೋಗೆ ಭೇಟಿ ನೀಡಿದಾಗ ಈ ಯೋಜನೆಗೆ ಅಡಿಪಾಯ ಹಾಕಲಿದ್ದಾರೆ ”ಎಂದು ಅಧಿಕಾರಿ ತಿಳಿಸಿದ್ದಾರೆ.







