ಯಾರು ಸಿಎಂ ಆಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ : ಎಂ.ಬಿ.ಪಾಟೀಲ್

ಮೈಸೂರು: ಎಲ್ಲರಲ್ಲಿಯೂ ಸಿಎಂ ಆಗಬೇಕು ಅನ್ನೊ ಆಸೆ ಇರುತ್ತದೆ. ಹಾಗಂತ ಎಲ್ಲರೂ ಸಿಎಂ ಆಗಲು ಸಾಧ್ಯವಿಲ್ಲ. ಯಾರು ಸಿಎಂ ಆಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಹೇಳಿದರು.
ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ರವಿವಾರ ಆಗಮಿಸಿ ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಎಲ್ಲರಲ್ಲಿಯೂ ಸಿಎಂ ಆಗಬೇಕು ಅನ್ನೊ ಆಸೆ ಇದ್ದೇ ಇರುತ್ತದೆ. ಹಾಗಂತ ಎಲ್ಲರೂ ಸಿಎಂ ಆಗಲು ಸಾಧ್ಯವಿಲ್ಲ, ಮೊದಲು 150 ಸೀಟು ಪಡೆಯಲು ನಾನು ಕೆಲಸ ಮಾಡಬೇಕು ನಂತರ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡು ಯಾರು ಸಿಎಂ ಆಗಬೇಕು ಎಂಬುದನ್ನು ನಿರ್ಧರಿಸಲಿದೆ ಎಂದರು.
ಈಗಾಗಲೇ ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರು ಯಾರೂ ಸಿಎಂ ವಿಚಾರದ ಬಗ್ಗೆ ಮಾತನಾಡಬಾರದು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ. ಹಾಗಾಗಿ ಯಾರೂ ಸಹ ಸಿಎಂ ವಿಚಾರದ ಬಗ್ಗೆ ಮಾತನಾಡುವುದಿಲ್ಲ, ಕೆಲವರು ಅಭಿಮಾನ ಪೂರ್ವಕವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ ಅಂತಹ ಅಭಿಮಾನದ ಹೇಳಿಕೆಗಳನ್ನೂ ನೀಡದಂತೆ ಸೂಚಿಸಲಾಗಿದೆ ಎಂದು ಹೇಳಿದರು.
ನಾವು150 ಸೀಟು ಪಡೆದು ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬರಲಿದೆ. ನಂತರ ಯಾರು ಮುಖ್ಯಮಂತ್ರಿ ಎಂದು ಹೈಕಮಾಂಡ್ ತೀರ್ಮಾನ ಮಾಡಲಿದೆ. ಚುನಾವಣೆಗೂ ಮುನ್ನ ಇಂತವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದಲ್ಲ ಎಂದು ಹೇಳಿದರು.
ಒಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಬಂದ ಮೇಲೆ ಅವರು ಕಾಂಗ್ರೆಸ್ಸಿಗರು, ಅವರು ವಲಸಿಗ, ಸ್ಥಳೀಯ ಎಂಬ ಪ್ರಶ್ನೆಯೇ ಇಲ್ಲ ಎಂದು ಎಂ.ಬಿ.ಪಾಟೀಲ್ ಹೇಳಿದರು.







