ಜಮ್ಮು ವಾಯುನೆಲೆಯ ಅವಳಿ ಸ್ಫೋಟಗಳು ಭಯೋತ್ಪಾದಕ ದಾಳಿ: ಜಮ್ಮು-ಕಾಶ್ಮೀರದ ಡಿಜಿಪಿ

ಹೊಸದಿಲ್ಲಿ: ಜಮ್ಮು ವಾಯು ನೆಲೆಯಲ್ಲಿ ನಡೆದ ಅವಳಿ ಸ್ಪೋಟಗಳು ಭಯೋತ್ಪಾದಕ ದಾಳಿಯಾಗಿದೆ. ದಾಳಿಯ ಹಿಂದಿನ ಯೋಜನೆಯನ್ನು ಬಿಚ್ಚಿಡಲು ಪೊಲೀಸರು ಹಾಗೂ ಇತರ ಏಜೆನ್ಸಿಗಳು ಭಾರತೀಯ ವಾಯುಪಡೆಯ ಅಧಿಕಾರಿಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.
ಭಯೋತ್ಪಾದನಾ ನಿಗ್ರಹ ತನಿಖಾ ಸಂಸ್ಥೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯ ತಂಡವೂ ಸ್ಥಳದಲ್ಲೇ ಇದೆ.
ಜಮ್ಮು ವಿಮಾನ ನಿಲ್ದಾಣದ ಐಎಎಫ್ ಸ್ಟೇಶನ್ ನಲ್ಲಿ ನಡೆದಿರುವ ಅವಳಿ ಸ್ಫೋಟಗಳು ಭಯೋತ್ಪಾದಕ ದಾಳಿಯಾಗಿದೆ. ಪೊಲೀಸರು, ಐಎಎಫ್, ಇತರ ಏಜೆನ್ಸಿಗಳು ಘಟನೆಯ ತನಿಖೆ ನಡೆಸುತ್ತಿವೆ ಎಂದು ಜಮ್ಮು-ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.
ಜಮ್ಮು ವಾಯುನೆಲೆಯಲ್ಲಿ ನಡೆದ ಎರಡೂ ಸ್ಫೋಟಗಳಲ್ಲಿ ಡ್ರೋನ್ ಬಳಸಿ ಸ್ಫೋಟಕ ವಸ್ತುಗಳನ್ನು ಬೀಳಿಸಲಾಗಿದೆ ಎಂದು ಶಂಕಿಸಲಾಗಿದೆ. 5-6 ಕೆಜಿ ತೂಕದ ಮತ್ತೊಂದು ಐಇಡಿಯನ್ನು ಜಮ್ಮು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದರು.
ವಾಯುಪಡೆಯ ತಾಂತ್ರಿಕ ಪ್ರದೇಶದಲ್ಲಿ ಸ್ಫೋಟಗಳು ನಡೆದಿದ್ದು, ಅಲ್ಲಿನ ಹೆಲಿಕಾಪ್ಟರ್‌ಗಳು ದಾಳಿಯ ಗುರಿಯಾಗಿತ್ತು ಎಂದು ತಿಳಿದುಬಂದಿದೆ.





