ಬೆಂಗಳೂರು: ಮನೆಗೆ ನುಗ್ಗಿ ಮಹಿಳೆಯನ್ನು ಬೆದರಿಸಿ ಲಕ್ಷಾಂತರ ರೂ. ನಗದು, ಚಿನ್ನಾಭರಣ ಲೂಟಿ
ಬೆಂಗಳೂರು, ಜೂ. 27: ಮನೆಯ ಮುಂಭಾಗ ನಿಂತಿದ್ದ ಮಹಿಳೆಯನ್ನು ಬೆದರಿಸಿ ಮನೆಯೊಳಗೆ ನುಗ್ಗಿ 2 ಲಕ್ಷ ರೂ. ನಗದು, 3 ಕೆಜಿ ಬೆಳ್ಳಿ ಸೇರಿ ಲಕ್ಷಾಂತರ ಮೌಲ್ಯದ ಮಾಲುಗಳನ್ನು ಇಬ್ಬರು ದುಷ್ಕರ್ಮಿಗಳು ದೋಚಿ ಪರಾರಿಯಾಗಿರುವ ದುರ್ಘಟನೆ ಹಾಡುಹಗಲೇ ವಿದ್ಯಾರಣ್ಯಪುರದಲ್ಲಿ ನಡೆದಿದೆ.
ವಿದ್ಯಾರಣ್ಯಪುರದ ಬಸವಸಮಿತಿ ಲೇಔಟ್‍ನ ಮನೆಯ ಮುಂಭಾಗ ಮಧ್ಯಾಹ್ನ ಜಯಶ್ರೀ ಅವರು ನಿಂತಿದ್ದಾಗ ಸುತ್ತಮುತ್ತಲಿನಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿರುವ ಇಬ್ಬರು ದುಷ್ಕರ್ಮಿಗಳು ಹತ್ತಿರ ಬಂದಿದ್ದಾರೆ. ಜಯಶ್ರೀ ಅವರು ಬಾಗಿಲ ಬಳಿ ಹೋಗಿ ಯಾರು ಎಂದು ವಿಚಾರಿಸುವಷ್ಟರಲ್ಲಿ ದುಷ್ಕರ್ಮಿಗಳು ಒಳನುಗ್ಗಿದ್ದಾರೆ. ಜಯಶ್ರೀ ಅವರು ರಕ್ಷಣೆಗಾಗಿ ಕೂಗಿಕೊಳ್ಳಲು ಬಿಡದೇ ಚಾಕುವಿನಿಂದ ಬೆದರಿಸಿ ಮನೆಯಲ್ಲಿದ್ದ 2 ಲಕ್ಷ ನಗದು, 3 ಕೆಜಿ ಬೆಳ್ಳಿ, 40ಗ್ರಾಂ ಚಿನ್ನ ಸೇರಿ ಲಕ್ಷಾಂತರ ಮೌಲ್ಯದ ಮಾಲುಗಳನ್ನು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಜಯಶ್ರೀ ಅವರ ಪತಿ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದು ಕೆಲಸಕ್ಕೆ ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಪ್ರಕರಣ ದಾಖಲಿಸಿರುವ ವಿದ್ಯಾರಣ್ಯಪುರ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.





