ಅಧಿಕಾರಿಯ ಸಮ್ಮುಖದಲ್ಲೇ ದೇವಾಲಯದ ಅರ್ಚಕ, ಅವರ ಪುತ್ರನಿಗೆ ಚಪ್ಪಲಿಯಿಂದ ಹಲ್ಲೆ

ಚಿಕ್ಕಮಗಳೂರು, ಜೂ.27: ಜಮೀನು ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ದೇವಾಲಯವೊಂದರ ಅರ್ಚಕ ಹಾಗೂ ಅವರ ಪುತ್ರನ ಮೇಲೆ ಒಂದೇ ಕುಟುಂಬದ 6 ಮಂದಿ ಕಂದಾಯ ಇಲಾಖೆ ಅಧಿಕಾರಿ ಸಮ್ಮುಖದಲ್ಲೇ ಹಲ್ಲೆ ಮಾಡಿರುವುದಲ್ಲದೇ ಚಪ್ಪಲಿಯಿಂದ ಹೊಡೆದಿರುವ ಘಟನೆ ಅಜ್ಜಂಪುರ ತಾಲೂಕಿನ ಗಿಜೆಕಟ್ಟೆ ಗ್ರಾಮದಲ್ಲಿ ಶನಿವಾರ ವರದಿಯಾಗಿದೆ.
ಅಜ್ಜಂಪುರ ತಾಲೂಕಿನ ಗಿಜೆಕಟ್ಟೆ ಗ್ರಾಮದಲ್ಲಿರುವ ಗವಿರಂಗನಾಥ ಸ್ವಾಮಿ ದೇವಾಲಯದ ಜಾಗ ಹಾಗೂ ದೇವಾಲಯದ ಪಕ್ಕದಲ್ಲೇ ಇರುವ ಗ್ರಾಮದ ರೈತರೊಬ್ಬರ ಜಮೀನುಗಳ ಗಡಿ ವಿಚಾರಕ್ಕೆ ವಿವಾದ ಉಂಟಾಗಿತ್ತು. ಈ ವಿವಾದದ ದೂರು ಕಂದಾಯಾಧಿಕಾರಿಗಳವರೆಗೂ ತಲುಪಿದ್ದು, ರಾಜಿ ಸಂದಾನ ಮೂಲಕ ವಿವಾದ ಬಗೆಹರಿಸುವ ಸಲುವಾಗಿ ಶನಿವಾರ ಜಾಗದ ಪರಿಶೀಲನೆಗೆ ಕಂದಾಯಾಧಿಕಾರಿ ಶಿವಶಂಕರ್ ಆಗಮಿಸಿದ್ದರು.
ಈ ವೇಳೆ ದೇವಾಲಯದ ಅರ್ಚಕ ಚೆನ್ನಕೇಶವಯ್ಯ ಹಾಗೂ ಅವರ ಪುತ್ರ ರಂಗನಾಥ್ ಕೂಡ ಸ್ಥಳಕ್ಕಾಗಮಿಸಿದ್ದರು. ಜಮೀನು ಪರಿಶೀಲನೆ ವೇಳೆ ದೇವಾಲಯದ ಅರ್ಚಕರು ಹಾಗೂ ದೇವಾಲಯದ ಪಕ್ಕದ ಜಮೀನು ಮಾಲಕರಾದ ಒಂದೇ ಕುಟುಂಬದ ರಾಜಪ್ಪ, ಶೇಖರಪ್ಪ, ಬಸವರಾಜಪ್ಪ, ನವೀನ್, ಸಿದ್ದರಾಮೇಗೌಡ ಹಾಗೂ ಕುಮಾರ್ ಎಂಬವರ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ಕೈಕೈ ಮಿಲಾಯಿಸುವವರೆಗೂ ತಲುಪಿದ್ದು, ಈ ಸಂದರ್ಭದಲ್ಲಿ ರೈತನ ಕುಟುಂಬದವರು ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗ ಶಿವಶಂಕರ್ ಸಮ್ಮುಖದಲ್ಲೇ ಅರ್ಚಕ ಚೆನ್ನಕೇಶವಯ್ಯ ಹಾಗೂ ಅವರ ಮಗ ರಂಗನಾಥ್ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ತಮ್ಮ ಚಪ್ಪಲಿಗಳಿಂದ ಥಳಿಸಿದ್ದಾರೆಂದು ತಿಳಿದು ಬಂದಿದೆ.
ಹಲ್ಲೆಯಿಂದಾಗಿ ಅರ್ಚಕ ಹಾಗೂ ಅವರ ಪುತ್ರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳದಲ್ಲಿದ್ದ ಗ್ರಾಮಸ್ಥರ ಮಧ್ಯ ಪ್ರವೇಶದಿಂದಾಗಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







