ಉಡುಪಿ : ಕೋವಿಡ್ ಗೆ ಮಹಿಳೆ ಬಲಿ, 96 ಮಂದಿಗೆ ಕೊರೋನ ಸೋಂಕು

ಉಡುಪಿ, ಜೂ.27: ಜಿಲ್ಲೆಯಲ್ಲಿ ರವಿವಾರ ಒಟ್ಟು 96 ಮಂದಿಯಲ್ಲಿ ಹೊಸದಾಗಿ ಕೊರೋನ ಸೋಂಕು ಪತ್ತೆಯಾಗಿದೆ. ದಿನದಲ್ಲಿ ಒಬ್ಬ ಮಹಿಳೆ ಮೃತಪಟ್ಟಿದ್ದು, 214 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ.
ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ ಇನ್ನಷ್ಟು ಕೆಳಕ್ಕಿಳಿದು 1010 ಆಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಸೋಂಕಿಗೆ ಬಲಿಯಾದವರು ಕಾರ್ಕಳ ತಾಲೂಕಿನ 66 ವರ್ಷ ಪ್ರಾಯದ ಮಹಿಳೆ. ಇವರಲ್ಲಿ ಕೋವಿಡ್‌ನ ಎಲ್ಲಾ ಗುಣಲಕ್ಷಣಗಳು ಕಾಣಿಸಿಕೊಂಡಿದ್ದು, ತೀವ್ರವಾದ ಉಸಿರಾಟ ತೊಂದರೆ ಹಾಗೂ ನ್ಯುಮೋನಿಯಾದಿಂದ ಚೇತರಿಸಿಕೊಳ್ಳದೇ ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು.
ಇಂದು ಪಾಸಿಟಿವ್ ಬಂದ 96 ಮಂದಿಯಲ್ಲಿ 31 ಮಂದಿ ಪುರುಷರು ಹಾಗೂ 65 ಮಂದಿ ಮಹಿಳೆಯರು. ಉಡುಪಿ ತಾಲೂಕಿನ 43, ಕುಂದಾಪುರ ತಾಲೂಕಿನ 37 ಹಾಗೂ ಕಾರ್ಕಳ ತಾಲೂಕಿನ 16 ಮಂದಿ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಇವರಲ್ಲಿ 8 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 88 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಶನಿವಾರ 214 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 64,736ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 2485 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಜಿಲ್ಲೆ ಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಈಗ 66,136 ಎಂದು ಡಾ.ಉಡುಪ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 6,76,569 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
ಇಂದು ಸಹ ಯಾರಲ್ಲೂ ಹೊಸದಾಗಿ ಕಪ್ಪು ಶಿಲೀಂದ್ರ ಸೋಂಕು ಕಾಣಿಸಿ ಕೊಂಡಿಲ್ಲ. ಚಿಕಿತ್ಸೆಯಲ್ಲಿದ್ದ ಒಬ್ಬರು ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ ನಾಲ್ವರು ಮಾತ್ರ ಈಗ ಚಿಕಿತ್ಸೆಯಲ್ಲಿದ್ದಾರೆ.
1396 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ರವಿವಾರ ಒಟ್ಟು 1396 ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇದರಲ್ಲಿ 1021 ಮಂದಿ ಮೊದಲ ಡೋಸ್ ಹಾಗೂ 375 ಮಂದಿ ಎರಡನೇ ಡೋಸ್ ಸ್ವೀರಿಸಿದ್ದಾರೆ.
ಇಂದು 18ರಿಂದ 44 ವರ್ಷದೊಳಗಿನ 489 (488+1) ಡೋಸ್ ಪಡೆದರೆ, 45 ವರ್ಷ ಮೇಲಿನ 907 (533+374) ಮಂದಿ ಲಸಿಕೆ ಸ್ವೀಕರಿಸಿದ್ದಾರೆ ಎಂದು ಡಾ.ಉಡುಪ ತಿಳಿಸಿದ್ದಾರೆ.







