ಸಮಾನ ಶಿಕ್ಷಣ, ಆರೋಗ್ಯಕ್ಕಾಗಿ ಜನಾಂದೋಲನ ಅಗತ್ಯ: ಶಿಕ್ಷಣ ತಜ್ಞ ಶ್ರೀಪಾದ್ ಭಟ್
ಬೆಂಗಳೂರು, ಜೂ.27: `ರಾಜ್ಯ ಸರಕಾರದ ಜನವಿರೋಧಿ ನೀತಿಗಳ ವಿರುದ್ಧವಾಗಿ ಸಮಾನ ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗಕ್ಕಾಗಿ ಜನಾಂದೋಲನ ರೂಪಿಸದಿದ್ದರೆ ಅಂಬೇಡ್ಕರ್, ಜ್ಯೋತಿಬಾ ಫುಲೆ ಅವರಂತಹ ಆಶಯಗಳು ನಮ್ಮೆದುರಿಗೆ ನಿರ್ಮೂಲನೆ ಆಗಲಿದೆ' ಎಂದು ಶಿಕ್ಷಣ ತಜ್ಞ ಶ್ರೀಪಾದ್ ಭಟ್ ಆತಂಕ ವ್ಯಕ್ತಪಡಿಸಿದ್ದಾರೆ.
ರವಿವಾರ ಕರ್ನಾಟಕ ವಿದ್ಯಾರ್ಥಿ ಶಕ್ತಿ ವತಿಯಿಂದ ಆಯೋಜಿಸಿದ್ದ ವೆಬಿನಾರ್ ನಲ್ಲಿ `ಕೋವಿಡ್ ಲಾಕ್‍ಡೌನ್ ಕಾಲದ ಶೈಕ್ಷಣಿಕ ಬಿಕ್ಕಟ್ಟು ಹಾಗೂ ಹೊಸ ಶಿಕ್ಷಣ ನೀತಿ ಮುಂದೇನು' ಎಂಬ ವಿಷಯದ ಕುರಿತು ಮಾತನಾಡಿದ ಅವರು, `ಕೇಂದ್ರ ಸರಕಾರ ಜಾರಿ ಮಾಡುತ್ತಿರುವ ಹೊಸ ಶಿಕ್ಷಣ ನೀತಿಯು ಶಿಕ್ಷಣವನ್ನು ಮೌಲ್ಯಯುತವಾಗಿ ರೂಪಿಸದೆ ಕೇವಲ ಮಾರುಕಟ್ಟೆಯಾಧಾರಿತ ಉದ್ಯೋಗಕ್ಕೆ ಸೀಮಿತಗೊಳಿಸಿ, ದೇಶದ ಮುಂದಿನ ತಲೆಮಾರನ್ನು ವ್ಯಕ್ತಿತ್ವ ಶೂನ್ಯಗೊಳಿಸಿ, ಗುಲಾಮರನ್ನಾಗಿ ರೂಪಿಸಲು ಹೊರಟಿದೆ' ಎಂದು ಟೀಕಿಸಿದರು.
ಹೊಸ ಶಿಕ್ಷಣ ನೀತಿಯು ತರಗತಿವಾರು ಶಿಕ್ಷಣವನ್ನು ಕಡಿತಗೊಳಿಸಿ, ಆನ್‍ಲೈನ್ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ಕೊಡುವುದಾಗಿದೆ. ಹಾಗೂ ಸಾರ್ವಜನಿಕ ಶಿಕ್ಷಣಕ್ಕೆ ಸರಕಾರದಿಂದ ಅನುದಾನವನ್ನು ಕಡಿತಗೊಳಿಸುತ್ತಾ ಸಾಗುವುದಾಗಿದೆ. ಇದರಿಂದ ಈಗಾಗಲೇ ಶಿಕ್ಷಣ ವಂಚಿತ ಸಮುದಾದಯ ವಿದ್ಯಾರ್ಥಿಯನ್ನು ಉನ್ನತ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹುನ್ನಾರವಾಗಿದೆ ಎಂದು ಅವರು ಎಚ್ಚರಿಸಿದರು.
ಕೇಂದ್ರ ಸರಕಾರದ ಸರ್ವಾಧಿಕರಣ, ಕೋಮುವಾದಿಕರಣ ನೀತಿಗಳಿಗೆ ಪ್ರಬಲವಾಗಿ ವಿರೋಧ ವ್ಯಕ್ತವಾಗುತ್ತಿರುವುದು ವಿದ್ಯಾರ್ಥಿ ಸಮುದಾಯದಿಂದಲೇ ಆಗಿದೆ. ಹೀಗಾಗಿ ವಿದ್ಯಾರ್ಥಿಗಳನ್ನು ಸಾಮಾಜಿಕರಣ ಮಾಡದೆ, ಆನ್‍ಲೈನ್, ಡಿಜಿಟಲ್ ತಂತ್ರಜ್ಞಾನದ ಮೂಲಕ ನಾಲ್ಕು ಗೋಡೆ ಮಧ್ಯೆದಲ್ಲೇ ಬಂಧಿಸಿಟ್ಟರೆ, ಸರಕಾರಗಳ ಜನವಿರೋಧಿ ನೀತಿಗಳನ್ನು ಪ್ರಶ್ನಿಸುವವರೇ ಇಲ್ಲವಾಗುತ್ತಾರೆ. ಹೀಗಾಗಿ ಹೊಸ ಶಿಕ್ಷಣ ನೀತಿಯನ್ನು ಜಾರಿ ಮಾಡಲು ಸರಕಾರ ತುದಿಗಾಲಲ್ಲಿ ನಿಂತಿವೆ' ಎಂದು ಅವರು ದೂರಿದರು.
ದೇಶದ ಜನಪ್ರತಿನಿಧಿಗಳಿಗೆ ದೇಶದ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಕುರಿತು ಅರಿವು, ಜ್ಞಾನ ಹಾಗೂ ಆಸಕ್ತಿ ಇಲ್ಲವಾಗಿದೆ. ಇಂತಹ ಲೋಪಗಳನ್ನು ದೇಶದ ಪಟ್ಟಭದ್ರ ಹಿತಾಸಕ್ತಿಗಳು, ಕಾರ್ಪೊರೇಟ್ ಶಕ್ತಿಗಳು ಜೊತೆಗೂಡಿ ದೇಶವನ್ನು ಆದೋಗತಿ, ಕುಲ ಕಸುಬು ಆಧಾರಿತ ವೃತ್ತಿಗೆ ಪುನಃ ಬಂಧಿಸಿಡುವಂತಹ ಷಡ್ಯಂತ್ರವನ್ನು ರೂಪಿಸಲಾಗುತ್ತಿದೆ. ಈ ಬಗ್ಗೆ ಜನಪರ ಸಂಘಟನೆಗಳು ಐಕ್ಯತೆಗೊಂಡು ಜನಾಂದೋಲನ ರೂಪಿಸಬೇಕಾದ ತುರ್ತು ಅಗತ್ಯವಿದೆ' ಎಂದು ಅವರು ಕರೆ ನೀಡಿದರು.







