ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೆರವಾಗಲು ಸರಕಾರಕ್ಕೆ ಪ್ರಿಯಾಂಕ್ ಖರ್ಗೆ ಒತ್ತಾಯ

ಬೆಂಗಳೂರು, ಜೂ. 27: `ಕೋವಿಡ್ ಮೂರನೆ ಅಲೆಯು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವ ಕುರಿತು ಸರಕಾರವೇ ನೇಮಿಸಿದ ತಜ್ಞರ ಸಮಿತಿ ಎಚ್ಚರಿಕೆ ನೀಡಿದೆ. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಕೊರೋನ ಸೋಂಕಿನಿಂದ ಹೆಚ್ಚಿನ ಅಪಾಯ ತಂದೊಡ್ಡುವ ಭೀತಿಯಿದೆ. ಆದರೆ, ಬಿಜೆಪಿ ಸರಕಾರ ಈವರೆಗೂ ಮಕ್ಕಳ ಆರೋಗ್ಯ ಕಾಳಜಿಯ ಕುರಿತು ಯಾವುದೇ ಚಿಂತನೆ ನಡೆಸಿಲ್ಲ' ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಹಾಲಿ ಶಾಸಕ ಪ್ರಿಯಾಂಕ ಖರ್ಗೆ ಟೀಕಿಸಿದ್ದಾರೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, `ರಾಜ್ಯದಲ್ಲಿ 6 ವರ್ಷದೊಳಗಿನ ಒಟ್ಟು 4.43 ಲಕ್ಷ ಮತ್ತು ಚಿತ್ತಾಪುರದಲ್ಲಿ 6,646 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಚಿತ್ತಾಪುರದ ಈ ಎಲ್ಲ ಮಕ್ಕಳಿಗೆ ವೈದ್ಯಕೀಯ ತಪಾಸಣೆ, ಪಾಲಕರಿಗೆ ಉಚಿತ ಲಸಿಕೆ ಜೊತೆಗೆ, ಇಮ್ಯೂನಿಟಿ ಬೂಸ್ಟರ್ ಪೌಷ್ಟಿಕಾಂಶಗಳುಳ್ಳ `ಶಕ್ತಿ ಕಿಟ್' ನೀಡಲಿದ್ದೇವೆ' ಎಂದು ತಿಳಿಸಿದ್ದಾರೆ.
ಈ ಮೂಲಕ ತಾಲೂಕಿನ ಮಕ್ಕಳ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷ ಸಕಲ ಸಿದ್ದತೆ ನಡೆಸಿದೆ. ಈ ಕುರಿತಂತೆ, ಮುಖ್ಯಮಂತ್ರಿ, ಆರೋಗ್ಯ ಸಚಿವರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ಪತ್ರದ ಮೂಲಕ ಇದೇ ಮಾದರಿಯಲ್ಲಿ ರಾಜ್ಯಾದ್ಯಂತ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೆರವಾಗಬೇಕು' ಎಂದು ಪ್ರಿಯಾಂಕ್ ಖರ್ಗೆ ಟ್ವಿಟ್ಟರ್ ಮೂಲಕ ಒತ್ತಾಯ ಮಾಡಿದ್ದಾರೆ.





