ಮಂಗಳೂರು : ಶ್ರೀನಿವಾಸ ಹೊಟೇಲ್ ಕಟ್ಟಡ ಕುಸಿತದ ವದಂತಿ
ಮಂಗಳೂರು, ಜೂ. 27: ‘ಹಂಪನಕಟ್ಟೆಯ ಶ್ರೀನಿವಾಸ ಹೊಟೇಲ್ ಕಟ್ಟಡ ಕುಸಿತದ ಭೀತಿ ಎದುರಿಸುತ್ತಿದೆ. ಕಟ್ಟಡ ಕುಸಿಯುವ ಭೀತಿಯಿಂದಾಗಿ ಆ ಭಾಗದಲ್ಲಿ ಪೊಲೀಸರು ರಸ್ತೆ ಸಂಚಾರವನ್ನು ಕಡಿತಗೊಳಿಸಿದ್ದಾರೆ’ ಎಂಬ ವದಂತಿ ಹರಡಿತ್ತು.
ಈ ಬಗ್ಗೆ ಮಾತನಾಡಿದ ಶ್ರೀನಿವಾಸ ಕಾಲೇಜ್ ಆಫ್ ಹೊಟೇಲ್ ಮ್ಯಾನೇಜ್‌ಮೆಂಟ್‌ನ ಮ್ಯಾನೇಜರ್ ನಿರಂಜನ್ ರಾವ್, ಹೊಟೇಲ್ ಕುಸಿತದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದೆ. ಇದನ್ನು ಯಾರೂ ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿಲ್ಲ. ಕಟ್ಟಡದ ಕೆಲವು ಕಡೆ ನವೀಕರಣದ ಕಾಮಗಾರಿ ನಡೆಯುತ್ತಿದೆ. ಮಳೆಯಿಂದಾಗಿ ಕೆಲಸಕ್ಕೆ ಅಡ್ಡಿಯಾಗಿದೆ. ವಿಂಡೋ ಭಾಗದಲ್ಲಿ ಕವರಿಂಗ್ ಕೆಲಸ ನಡೆಯುತ್ತಿದ್ದು ಸಿಮೆಂಟ್ ಚಪ್ಪಡಿ ಯಾರ ತಲೆಗೂ ಬೀಳುವುದು ಬೇಡ ಎಂದು ಟರ್ಪಾಲ್ ಹಾಕಿ ಮುಚ್ಚಲಾಗಿದೆ. ಇದು ಬಿಟ್ಟರೆ, ಇಡೀ ಕಟ್ಟಡ ಕುಸಿಯುವಂಥದ್ದೇನು ನಡೆದಿಲ್ಲ. ಟರ್ಪಾಲ್ ಹಾಕಿದ್ದು ಮತ್ತು ಕೆಲಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಲವು ಕಡೆ ಸಿಮೆಂಟ್ ಅಗೆದಿರುವುದನ್ನು ನೋಡಿ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.





