ಲಾಕ್‌ಡೌನ್‌ನಲ್ಲಿ ಕೊರಗರ ನೆರವಿಗೆ ಬಾರದ ಉಡುಪಿ ಜಿಲ್ಲಾಡಳಿತ: ಆರೋಪ
ಪ್ರತಿಭಟನಾರ್ಥವಾಗಿ ಹಲವು ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಬೈಂದೂರು, ಜೂ.27: ಬೈಂದೂರು ತಾಲೂಕಿನ ನಾಡ, ಕೊಣ್ಕಿ, ಹೆಮ್ಮುಂಜೆ ಕೊರಗ ಸಮುದಾಯ 26 ಕುಟುಂಬಗಳಿಗೆ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಜಿಲ್ಲಾ ಸಂಘಟನಾ ಸಮಿತಿ ನೇತೃತ್ವದಲ್ಲಿ ಆಹಾರದ ಕಿಟ್ ವಿತರಣೆ ಮಾಡಲಾಯಿತು.
ಜಿಲ್ಲಾಡಳಿತ ಕೊರಗ ಸಮುದಾಯದ ನೆರವಿಗೆ ಬಾರದೆ ಇರುವುದನ್ನು ಪ್ರತಿಭಟಿಸಿ ಹಲವು ದಾನಿಗಳ ಸಹಾಯದಿಂದ ನೆರವಿನಿಂದ ಸಿಐಟಿಯು ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡ ಅನ್ನಪೂರ್ಣ ಅಭಿಯಾನ ಯೋಜನೆ ಮೂಲಕ ಆಹಾರದ ಕಿಟ್ ವಿತರಿಸಲಾಯಿತು.
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹ ಸಂಚಾಲಕ ಶ್ರೀಧರ್ ನಾಡ ಮಾತನಾಡಿ, ಜಿಲ್ಲೆಯಲ್ಲಿ ಲಾಕ್‌ಡೌನ್, ಕೋವಿಡ್ ಸಂದರ್ಭ ದಲ್ಲಿ ಅತ್ಯಂತ ಹೆಚ್ಚು ಕಷ್ಟಕ್ಕೆ ಒಳಗಾದವರು ಕೊರಗ ಸಮುದಾಯದವರು. ಅಪೌಷ್ಟಿಕತೆ, ರಕ್ತಹೀನತೆಯಿಂದ ಬಳಲುತ್ತಿರುವ ಕೊರಗ ಸಮುದಾಯದ ಆರೋಗ್ಯಕ್ಕೆ ಸಂಬಂಧಿಸಿದ ಅಧ್ಯಯನವನ್ನು ಸರಕಾರ ನಡೆಸಿದರೂ ಯಾವುದೇ ಕಾರ್ಯಕ್ರಮಗಳನ್ನು ಕೂಡ ಈವರೆಗೆ ಜಾರಿಗೆ ತಂದಿಲ್ಲ. ಲಾಕ್‌ಡೌನ್‌ನಲ್ಲಿ ಆಹಾರದ ಸಮಸ್ಯೆ ಎದುರಾದರೂ ಇವರಿಗೆ ಉಚಿತ ಪೌಷ್ಟಿಕ ಆಹಾರ ವಿತರಿಸಲು ಜಿಲ್ಲಾಡಳಿತ ಈವರೆಗೆ ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು.
ಜಿಲ್ಲೆಯ ಕೊರಗ ಸಮುದಾಯದ ನಿರುದ್ಯೋಗಿ ಯುವಜನರಿಗೆ ಕಳೆದ ವರ್ಷ ನೀಡಬೇಕಾದ ನಿರುದ್ಯೋಗ ಭತ್ಯೆ ಈವರೆಗೆ ನೀಡಿಲ್ಲ. ಕರ್ನಾಟಕ ರಾಜ್ಯದಲ್ಲಿ ಕೊರಗರು ಮತ್ತು ಜೇನು ಕುರುಬ ಜನಾಂಗದವರಿಗೆ ನೀಡಬೇಕಾದ ಪಿ.ವಿ.ಟಿ.ಜಿ. ಅನುದಾನ 2014ರಿಂದ ಇಲ್ಲಿಯವರೆಗೆ ಕೇಂದ್ರ ಸರಕಾರದ ಬಿಡುಗಡೆಗೊಳಿಸದೆ ಅನ್ಯಾಯ ಮಾಡಿದೆ ಎಂದು ಅವರು ದೂರಿದರು.
ಇದೇ ಸಂದರ್ಭದಲ್ಲಿ ಕೋವಿಡ್ ಎದುರಿಸುವ ಕುರಿತು ಮತ್ತು ಲಸಿಕೆ ಪಡೆಯಲು ಜಾಗೃತಿ ಮೂಡಿಸಲಾಯಿತು. ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ನಾಡ ಗ್ರಾಪಂ ಸದಸ್ಯ ರಾಜೀವ ಪಡು ಕೋಣೆ, ಡಿವೈಎಫ್‌ಐ ಮುಖಂಡರಾದ ರಾಜೇಶ್ ಪಡುಕೋಣೆ, ಶಿವರಾಜ್ ನಾಡ ಉಪಸ್ಥಿತರಿದ್ದರು.







