ದಲಿತರ ಮೀಸಲು ನಿಧಿ ಇತರ ಕಾಮಗಾರಿಗೆ ಬಳಕೆ ಆರೋಪ : ಖಂಡನೆ
ಉಡುಪಿ, ಜೂ.27: ನಗರಸಭೆಯಲ್ಲಿ ದಲಿತರ ಶೇ.4.75 ನಿಧಿಯಲ್ಲಿ ದಲಿತರ ಮೂಲಭೂತ ಸೌಕರ್ಯಗಳಿಗೆ ಮೀಸಲಿರಿಸದೆ ರಸ್ತೆ ಕಾಮಗಾರಿ ಮತ್ತು ಇನ್ನಿತರ ಅನಗತ್ಯ ಯೋಜನೆಗಳಿಗೆ ವ್ಯರ್ಥ ಮಾಡಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ತಾಲೂಕು ಸಮಿತಿ ಹಾಗೂ ಮೂಡಬೆಟ್ಟು ನಗರಶಾಖೆ ತೀವ್ರವಾಗಿ ಖಂಡಿಸಿದೆ.
ನಗರಸಭೆಯ ಮೂಡಬೆಟ್ಟು ವಾರ್ಡ್‌ನಲ್ಲಿ ದಲಿತ ಕಾಲನಿಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಇಲ್ಲಿ ಚರಂಡಿ, ರಸ್ತೆ ಸಮಪರ್ಕವಾಗಿಲ್ಲ. ಕೆಲವು ದಲಿತರ ಮನೆಗಳು ಭೀಳುವ ಸ್ಥಿತಿಯಲ್ಲಿದೆ ಮತ್ತು ಇನ್ನು ಕೆಲವು ಮನೆಗಳಿಗೆ ಸರಿಯಾದ ಶೌಚಾಲಯಗಳಿಲ್ಲ. ಈ ಬಗ್ಗೆ ನಗರಸಭೆ ದೂರು ನೀಡಿದರೂ ಸರಿಯಾಗಿ ಸ್ಪಂದಿಸಿಲ್ಲ ಎಂದು ದಸಂಸ ತಾಲೂಕು ಸಮಿತಿ ಸಂಚಾಲಕ ಶಂಕರ್ ದಾಸ್ ದೂರಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ನಗರಸಭೆಯಲ್ಲಿರುವ ಈ ನಿಧಿಯನ್ನು ದಲಿತ ಕಾಲನಿಯ ಕುಡಿಯುವ ನೀರು, ಶೌಚಾಲಯ, ವಿದ್ಯುತ್, ಶಿಕ್ಷಣ ಇನ್ನಿತರ ಮೂಲಭೂತ ಸೌಕರ್ಯಗಳಿಗೆ ವ್ಯಯಿಸಬೇಕು ಎಂದು ನಗರ ಶಾಖೆ ಸಂಚಾಲಕ ಶಿವಾನಂದ ಮೂಡುಬೆಟ್ಟು ಆಗ್ರಹಿಸಿದ್ದಾರೆ.





