ಶೈಕ್ಷಣಿಕ ಕ್ಷೇತ್ರದಲ್ಲಿ ಸರಕಾರಿ-ಖಾಸಗಿ ಎಂಬ ತಾರತಮ್ಯ ಬೇಡ: ಲೋಕೇಶ್ ತಾಳಿಕಟ್ಟೆ
ಬೆಂಗಳೂರು, ಜೂ. 27: `ರಾಜ್ಯ ಸರಕಾರ ಶಾಲೆ ಪ್ರಾರಂಭ ಮಾಡುವುದರ ಬಗ್ಗೆ, ಬಿಸಿಯೂಟ ನೀಡುವುದು ಸೇರಿದಂತೆ ಶೈಕ್ಷಣಿಕ ವಿಷಯಗಳಲ್ಲಿ ಸರಕಾರಿ ಹಾಗೂ ಖಾಸಗಿ ಶಾಲೆಗಳೆಂದು ತಾರತಮ್ಯ ಮಾಡದೆ ಎಲ್ಲ ಶಾಲೆಗಳನ್ನು ಸಮಾನವಾಗಿ ಕಾಣಬೇಕು' ಎಂದು ರಾಜ್ಯ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, `50 ವಿದ್ಯಾರ್ಥಿ ಒಳಗಿರುವ ಸರಕಾರಿ ಶಾಲೆಗಳನ್ನು ಮಾತ್ರ ಪ್ರಾರಂಭಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳುತ್ತಾ ಬರುತ್ತಿದ್ದಾರೆ. ಗ್ರಾಮೀಣ ಹಾಗೂ ನಗರಗಳಲ್ಲೂ ಸಣ್ಣಪ್ರಮಾಣದ ಖಾಸಗಿ ಶಾಲೆಗಳಿವೆ. ಆದರೆ, ಸಚವರು ಮಾತ್ರ ಖಾಸಗಿ ಶಾಲೆಗಳನ್ನು ಪರಿಗಣಿಸುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಎರಡು ವರ್ಷಗಳಿಂದ ಶಾಲೆಗಳು ಪ್ರಾರಂಭವಾಗದೇ ಇರುವುದರಿಂದ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸಚಿವ ಸುರೇಶ್ ಕುಮಾರ್ ತೆಗೆದುಕೊಂಡ ಅವೈಜ್ಞಾನಿಕ ನೀತಿಗಳೇ ಇದಕ್ಕೆ ಕಾರಣವಾಗಿದೆ. ಹೀಗಾಗಿ 50 ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಮಾತ್ರ ಅನುಮತಿಸದೆ, ಪಾಳಿ ಪದ್ಧತಿಯನ್ನು ಅನುಸರಿಸಲು ಆದೇಶಿಸಿ ಪ್ರತಿ ಶಾಲೆಗೂ ಅನುಮತಿ ನೀಡಬೇಕು' ಎಂದು ಅವರು ಒತ್ತಾಯಿಸಿದ್ದಾರೆ.
`ಶಾಲೆಗಳು ಪ್ರಾರಂಭವಾಗುವುದಕ್ಕೂ ಮುನ್ನ ಪ್ರತಿ ಶಾಲಾ ಶಿಕ್ಷಕರಿಗೂ, ವಿದ್ಯಾರ್ಥಿಗಳ ಪೋಷಕರಿಗೂ ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕು. ಆಗ ಮಾತ್ರ ವಿದ್ಯಾರ್ಥಿಗಳು ಸುರಕ್ಷಿತ ವಲಯದಲ್ಲಿ ಓದಲು ಸಾಧ್ಯವಾಗುತ್ತದೆ. ಹಾಗೆಯೇ ಸರಕಾರಿ ಶಾಲೆಗಳಿಗೆ ನೀಡುತ್ತಿರುವ ಬಿಸಿಯೂಟ ವ್ಯವಸ್ಥೆಯನ್ನು ಗ್ರಾಮೀಣ ಹಾಗೂ ನಗರದಲ್ಲಿರುವ ಸಣ್ಣ ಪ್ರಮಾಣದ ಖಾಸಗಿ ಶಾಲೆಗಳಿಗೂ ವಿಸ್ತರಿಸಬೇಕು' ಎಂದು ಅವರು ಮನವಿ ಮಾಡಿದ್ದಾರೆ.







