ಛಾತ್ರಸಾಲ್ ಕ್ರೀಡಾಂಗಣ ಪ್ರಕರಣ: ಕುಸ್ತಿಪಟು ಗೌರವ್ ಲಾರಾ ಬಂಧನ

ಹೊಸದಿಲ್ಲಿ, ಜೂ. 27: ಓರ್ವ ಕುಸ್ತಿಪಟು ಸಾವನ್ನಪ್ಪಿದ ಹಾಗೂ ಆತನ ಇಬ್ಬರು ಗೆಳೆಯರು ಗಾಯಗೊಂಡ ಛಾತ್ರಸಾಲ್ ಕ್ರೀಡಾಂಗಣದಲ್ಲಿ ನಡೆದ ಕಾದಾಟ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸ್ ನ ಕ್ರೈಮ್ ಬ್ರಾಂಚ್ ರವಿವಾರ 22ರ ಹರೆಯದ ಕುಸ್ತಿಪಟು ಓರ್ವನನ್ನು ಬಂಧಿಸಿದೆ.
ಬಂಧಿತ ಕುಸ್ತಿಪಟು ಗೌರವ್ ಲಾರಾ ಹರ್ಯಾಣದ ನಿವಾಸಿ. ಈತ ಹೊಸದಿಲ್ಲಿಯ ನಜಫ್ಗಢದ ಬಾಪ್ರೊಲ್ಲಾ ಗ್ರಾಮದಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ದಿಲ್ಲಿಯಿಂದ ಬಂಧಿಸಲಾದ ಗೌರವ್ ಲಾರಾನ ಪ್ರಕರಣವನ್ನು ಕ್ರೈಮ್ ಬ್ರಾಂಚ್ ನ ತಂಡ ತನಿಖೆ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘‘ಯುವ ಕುಸ್ತಿಪಟು ಸಾವನ್ನಪ್ಪಲು ಕಾರಣವಾದ ಛಾತ್ರಸಾಲ್ ಕ್ರೀಡಾಂಗಣದಲ್ಲಿ ನಡೆದ ಘಟನೆಯಲ್ಲಿ ಗೌರವ್ ಲಾರಾ ಪಾಲ್ಗೊಂಡಿರುವುದು ಬೆಳಕಿಗೆ ಬಂದಿದೆ’’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಒಲಿಂಪಿಕ್ ನಲ್ಲಿ ಎರಡು ಬಾರಿ ಚಿನ್ನದ ಪದಕ ಪಡೆದುಕೊಂಡ ಕುಸ್ತಿಪಟು ಸುಶೀಲ್ ಕುಮಾರ್ ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





