ಎನ್‍ಟಿಎಂಎಸ್ ಸರ್ಕಾರಿ ಶಾಲೆ ಉಳಿಸಿಕೊಳ್ಳಲು ರಾಜ್ಯಾದ್ಯಂತ ಹೋರಾಟ: ಹಿರಿಯ ಸಮಾಜವಾದಿ ಪ.ಮಲ್ಲೇಶ್

ಮೈಸೂರು,ಜೂ.27: ನಗರದ ಮಹರಾಣಿ ಎನ್‍ಟಿಎಂ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯನ್ನು ಉಳಿಸಿಕೊಳ್ಳುವುದೇ ನಮ್ಮ ಉದ್ದೇಶವಾಗಿದ್ದು, ಈ ಶಾಲೆ ಉಳಿಸಿಕೊಳ್ಳುವುದಕ್ಕಾಗಿ ರಾಜ್ಯಾದ್ಯಂತ ಹೋರಾಟವನ್ನು ವಿಸ್ತರಿಸಲಾಗುವುದು ಎಂದು ಹಿರಿಯ ಸಮಾಜವಾದಿ ಪ.ಮಲ್ಲೇಶ್ ತಿಳಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹರಾಣಿ ಎನ್‍ಟಿಎಂಎಸ್ ಸರ್ಕಾರಿ ಹೆಣ್ಣುಮಕ್ಕಳ ಶಾಲೆ ಉಳಿಸಿಕೊಳ್ಳಲು ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಈ ಶಾಲೆಯ ಉಳಿವು ಕನ್ನಡದ ಉಳಿವಾಗಿದೆ. ಅಂದಿನ ಮೈಸೂರು ಮಹಾರಾಣಿಯವರು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಎನ್‍ಎಂಎಸ್ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯನ್ನು ಪ್ರಾರಂಭ ಮಾಡಿದ್ದರು. ಆದರೆ ಈ ಶಾಲೆಯನ್ನು ಕೆಡವಿ ವಿವೇಕನಂದರ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿರುವ ರಾಮಕೃಷ್ಣ ಆಶ್ರಮದವರಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಹೈಕೋರ್ಟ್ ತೀರ್ಪನ್ನು ನಾವು ಗೌರವಿಸುತ್ತೇವೆ. ಆದರೆ ಅದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ, ಶಾಲೆ ಇರುವ ಜಾಗವು ಸರ್ಕಾರದ್ದಲ್ಲ. ಈ ಜಾಗವನ್ನು ಬೇರೊಂದು ಸಂಸ್ಥೆಗೆ ನೀಡಲು ಸರ್ಕಾರಕ್ಕೆ ಅಧಿಕಾರ ಕೊಟ್ಟವರು ಯಾರು. ಒಬ್ಬ ವಿದ್ಯಾರ್ಥಿ ಇದ್ದರೂ ಶಾಲೆಯನ್ನು ಮುಚ್ಚಬಾರದು ಎಂದು ಸರ್ಕಾರ ಹೇಳುತ್ತದೆ. ಅಂತಹದರಲ್ಲಿ ಎನ್‍ಟಿಎಂ ಶಾಲೆ ಉರುಳಿಸಲು ಹೊರಟಿರುವುದೇಕೆ ಎಂದು ಪ್ರಶ್ನಿಸಿದರು.
ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಲೇಬೇಕು ಎಂದಾದರೆ ಶಾಲೆ ಉಳಿಸಿ ನಂತರ ಸ್ಮಾರಕ ನಿರ್ಮಾಣ ಮಾಡಲಿ ಎಂದು ಹೇಳಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಚಾರಿತ್ರಿಕ ಮಹತ್ವದ್ದೆಂದು ಬ್ರಿಟಿಷರು ಕಟ್ಟಿದ ಸಾಕಷ್ಟು ಪ್ರತಿಮೆಗಳನ್ನು ಕಟ್ಟಡಗಳನ್ನು ನಾವು ಉಳಿಸಿಕೊಂಡು ಬಂದಿದ್ದೇವೆ. ಈ ಶಾಲೆಯನ್ನು ಉಳಿಸುವ ಅವಕಾಶ ಸರ್ಕಾರಕ್ಕಿದೆ. ಐತಿಹಾಸಿಕ ಶಾಲೆಯನ್ನು ಕೆಡವಿ ಸ್ಮಾರಕ ಕಟ್ಟುತ್ತೇವೆ ಎನ್ನುವುದು ಸ್ವಾಮಿ ವಿವೇಕಾನಂದರ ವಿಚಾರಧಾರೆಗಳಿಗೆ ಅವಮಾನ ಮಾಡಿದಂತೆ. ಹೈಕೋರ್ಟ್ ತೀರ್ಪನ್ನು ವಿರೋಧಿಸುವುದು ನ್ಯಾಯಾಂಗ ನಿಂದನೆ ಆಗುವುದಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಹೋರಾಟಗಾರ ಸ.ರ.ಸುದರ್ಶನ್, ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜೇ ಅರಸ್, ದಲಿತ ಸಂಘಟನೆಯ ಬೆಟ್ಟಯ್ಯ ಕೋಟೆ, ಆಲಗೂಡು ಶಿವಕುಮಾರ್, ಪರಿಸರ ಹೋರಾಟಗಾರ್ತಿ ಬಾನು ಮೋಹನ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಯಡಿಯೂರಪ್ಪರನ್ನು ಯಾಮಾರಿಸಿ ಸ್ವಾಮೀಜಿ ಸಹಿ ಹಾಕಿಸಿಕೊಂಡಿದ್ದಾರೆ: ನಂಜರಾಜೇ ಅರಸ್
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಯಾಮಾರಿಸಿ ರಾಮಕೃಷ್ಣ ಮಠದ ಸ್ವಾಮೀಜಿ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜೇ ಅರಸ್ ಆರೋಪಿಸಿದರು.
ಯಡಿಯೂರಪ್ಪ ಅವರು ಶಾಲೆಯನ್ನು ಉಳಿಸಿ ಸ್ಮಾರಕವನ್ನು ನಿರ್ಮಾಣ ಮಾಡಲು ಮನಸ್ಸು ಮಾಡಿದ್ದರು. ಆದರೆ ಅವರಿಗೆ ಸ್ಮಾಮೀಜಿ ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿ ಯಾಮಾರಿಸಿ ಸಹಿ ಹಾಕಿಸಿಕೊಂಡಿದ್ದಾರೆ ಎಂದು ದೂರಿದರು.
ಶಾಲೆಗೆ ಸೇರಿದ ಜಾಗವನ್ನು ಹಾಗೆಯೇ ಉಳಿಸಿ, ಉಳಿದ ಜಾಗದಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಿಸಬೇಕು ಎಂದು 2019ರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪ ಆದೇಶಿಸಿದ್ದಾರೆ. ಅವರಿಗೆ ಶಾಲೆಯನ್ನು ಉಳಿಸಬೇಕು, ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಬೇಕು ಎಂಬ ಮನಸ್ಸು ಇತ್ತು ಎಂದು ಹೇಳಿದರು.







