ಕುರ್‌ಆನ್ ಅವಹೇಳನ ಆರೋಪ: ವಾಸಿಮ್ ರಿಜ್ವಿ ಬಂಧನಕ್ಕೆ ಆಗ್ರಹಿಸಿ ಮನವಿ

ಚಿಕ್ಕಮಗಳೂರು, ಜೂ.27: ಮುಸ್ಲಿಮರ ಪವಿತ್ರ ಗ್ರಂಥವಾಗಿರುವ ಕುರ್‌ಆನ್ ಬಗ್ಗೆ ಉತ್ತರ ಪ್ರದೇಶದ ಶಿಯಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಸಮುದಾಯದವರ ಭಾವನೆಗಳನ್ನು ಘಾಸಿಗೊಳಿಸಿರುವ ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್‍ನ ಜಿಲ್ಲಾ ಘಟಕ ಜಿಲ್ಲಾಧಿಕಾರಿ ಮೂಲಕ ಯುಪಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಈ ಸಂಬಂಧ ಮನವಿ ಪತ್ರವನ್ನು ಕಂದಾಯಾಧಿಕಾರಿ ಮೂಲಕ ಅಲ್ಲಿನ ರಾಜ್ಯಪಾಲರಿಗೆ ಸಲ್ಲಿಸಿದ ಕೌನ್ಸಿಲ್‍ನ ಮುಖಂಡರು, ಉತ್ತರ ಪ್ರದೇಶ ಸರಕಾರದ ಶಿಯಾ ವಕ್ಫ್ ಬೋರ್ಡ್‍ನ ಮಾಜಿ ಅಧ್ಯಕ್ಷರಾಗಿರುವ ವಾಸಿಮ್ ರಿಜ್ವಿ ಎಂಬವರು ಮುಸ್ಲಿಂ ಸಮುದಾಯದ ಧಾರ್ಮಿಕ ಗ್ರಂಥವಾಗಿರುವ ಕುರ್‌ಆನ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ಅಗೌರವ ತೋರಿದ್ದಾರೆ. ಅವರ ಹೇಳಿಕೆಯಿಂದಾಗಿ ದೇಶದಲ್ಲಿರುವ ಅಲ್ಪಸಂಖ್ಯಾತ ಸಮುದಾಯದವರ ಭಾವನೆಗಳಿಗೆ ಘಾಸಿ ಉಂಟಾಗಿದ್ದು, ಸಮುದಾಯದ ಸಹಿಷ್ಣು ಭಾವನೆಯನ್ನು ಕೆರಳಿಸುವಂತೆ ಮಾಡಿದೆ. ರಿಜ್ವಿ ಅವರ ಈ ಹೇಳಿಕೆಯನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.
ಈ ವೇಳೆ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್‍ನ ಜಿಲ್ಲಾ ಘಟಕದ ಮುಖಂಡರಾದ ಮೌಲ್ವಿ ಮುಹಮ್ಮದ್ ಯೂನಸ್, ಹಫೀಜ್ ಮುಹಮ್ಮದ್ ಮೊಹಸಿನ್ ಸಾಬ್, ಮೌಲ್ವಿ ಮುಹಮ್ಮದ್ ಸುಹೇಬ್ ಸಾಬ್, ಮೌಲ್ವಿ ಅರಾಫತ್ ಸಾಬ್, ಮುಹಮ್ಮದ್ ಶಾಹಿದ್ ಸಾಬ್ ಹಾಗೂ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಜ್ಮತ್‍ಪಾಶ ಮತ್ತಿತರರು ಉಪಸ್ಥಿತರಿದ್ದರು.





