ಆರ್ಥಿಕ ಸಂಕಷ್ಟ: ಸ್ಥಗಿತಗೊಂಡ ಮನೆ ಪೂರ್ಣಗೊಳಿಸಿದ ಮಲಬಾರ್ ಗೋಲ್ಡ್, ರೋಟರಿ ಕ್ಲಬ್

ಪಡುಬಿದ್ರಿ: ಮನೆ ಪೂರ್ತಿಗೊಳಿಸಲು ಆಗದೆ ಸಂಕಷ್ಟಕ್ಕೊಳಗಾಗಿದ್ದ ಹೆಜಮಾಡಿಯ ಮಹಿಳೆಗೆ ಉಡುಪಿಯ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ರೋಟರಿ ಕ್ಲಬ್ ಪಡುಬಿದ್ರಿ ಪೂರ್ಣಗೊಳಿಸಿ ಮನೆಯ ಕೀಲಿ ಕೈಯನ್ನು ರವಿವಾರ ಹಸ್ತಾಂತರಿಸಲಾಯಿತು.
ಹೆಜಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡವಿನ ಬಾಗಿಲು ನಿವಾಸಿ ಬೇಚ ಅವರು ಕೂಲಿ ಕೆಲಸ ನಡೆಸುತಿದ್ದರು. ಆರು ವರ್ಷಗಳ ಹಿಂದೆ ಅನಾರೋಗ್ಯ ಪೀಡಿತರಾಗಿ ಮೃತಪಟ್ಟಿದ್ದರು. ಪತ್ನಿ ಕಮಲ ಕುಂದರ್ ಇಬ್ಬರು ಮಕ್ಕಳೊಂದಿಗೆ ಬೀಡಿ ಕಟ್ಟಿ ಜೀವನ ನಡೆಸುತಿದ್ದರು. ಆರ್ಥಿಕ ಸಂಕಷ್ಟದಲ್ಲಿದ್ದ ಇವರಿಗೆ ಬಸವ ಕಲ್ಯಾಣ ಯೋಜನೆಯಲ್ಲಿ ಬಂದ ಹಣದಲ್ಲಿ ಮನೆ ನಿರ್ಮಾಣಕ್ಕೆ ಮುಂದಾದರು ಆದರೆ ಮತ್ತೆ ಹಣದ ಕೊರತೆ ಎದುರಾಗಿ ಮನೆಯನ್ನು ಅರ್ಧದಲ್ಲಿ ಸ್ಥಗಿತಗೊಂಡಿತ್ತು. ಇದನ್ನು ಅರಿತ ರೋಟರಿ ಕ್ಲಬ್ ಹಾಗೂ ಮಲಬಾರ್ ಗೋಲ್ಡ್ ಮನೆ ಕಾಮಗಾರಿ ಪೂರ್ಣಗೊಳಿಸಲು ಮುಂದಾದರು.
ಮಲಬಾರ್ ಗೋಲ್ಡ್‍ನ ರೂ. 75 ಸಾವಿರ ಹಾಗೂ ರೋಟರಿ ಕ್ಲಬ್ ದಾನಿಗಳ ಸಹಕಾರದಿಂದ ಮನೆಯ ಕಾಮಗಾರಿ ಪೂರ್ಣ ಗೊಳಿಸಲು ನೆರವಾದರು. ರವಿವಾರ ಕೀಲಿ ಕೈಯನ್ನು ಮಾಜಿ ಸಚಿವ ವಿನಯಕುಮಾರ್ ಸೊರಕೆ ಕಮಲ ಕುಂದರ್ ಅವರಿಗೆ ಹಸ್ತಾಂತರಿಸಿದರು.
ರೋಟರಿ ಅಧ್ಯಕ್ಷ ಕೇಶವ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮನೆ ನಿರ್ಮಾಣದ ಉಸ್ತುವಾರಿ ವಹಿಸಿದ ಸಮಾಜಿಕ ಚಿಂತಕ ಸುಧಾಕರ್ ಕೆ. ರವರನ್ನು ಗೌರವಿಸಲಾಯಿತು.
ಉಡುಪಿ ಮಲಬಾರ್ ಗೋಲ್ಡ್ ಆ್ಯಂಡ್ ಡ್ಯೆಮಂಡ್ ಚಾರಿಟೇಬಲ್ ಟ್ರಸ್ಟ್ ಶಾಖಾ ವ್ಯವಸ್ಥಾಪಕ ಹಫೀಝ್ ರೆಹಮಾನ್, ಜಿಆರ್‍ಎಮ್ ರಾಘವೇಂದ್ರ ನಾಯಕ್, ಚಾರಿಟಿ ಉಸ್ತುವಾರಿ ತಂಝೀಮ್ ಶಿರ್ವ, ಮುಕೇಶ್ ಶೆಟ್ಟಿ, ರೋಟರಿ ಕ್ಲಬ್‍ನ ನಿಕಟ ಪೂರ್ವ ಸಹಾಯಕ ಗವರ್ನರ್ ಗಣೇಶ್ ಅಚಾರ್ಯ ಉಚ್ಚಿಲ, ಕಾಪು ತಾಲೂಕು ಅಂಬೇಡ್ಕರ್ ಯುವ ಸೇನಾ ಗೌರವ ಅಧ್ಯಕ ಪಿ.ಕೃಷ್ಣ ಬಂಗೇರ, ಪಡುಬಿದ್ರಿ ಗ್ರಾಮ ಪಂ. ಉಪಾಧ್ಯಕ್ಷೆ ಯಶೋಧ, ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್, ಹೆಜಮಾಡಿ ಬಸ್ತಿಪಡ್ಪು ಶ್ರೀ ಬಬುಸ್ವಾಮಿ ದ್ಯೆವಸ್ಥಾನದ ಅರ್ಚಕ ಜಗನ್ನಾಥ ಮುಖಾರಿ, ಹೆಜಮಾಡಿ ಪಡುಕರೆ ಬಿಲ್ಲವರ ಸಮಾಜ ಸೇವಾ ಸಮಾಜ ಸಂಘದ ಅಧ್ಯಕ್ಷ ಸುಧೀರ್ ಕರ್ಕೇರ, ರೋಟರಿ ಕಾರ್ಯದರ್ಶಿ ಮಹಮ್ಮದ್ ನಿಯಾಜ್ ಉಪಸ್ಥಿತರಿದ್ದರು. ಸಂತೋಷ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.







