ಜೂ.28ರಿಂದ ಕಾಲೇಜು ವಿದ್ಯಾರ್ಥಿ, ಸಿಬ್ಬಂದಿ ವರ್ಗಕ್ಕೆ ಲಸಿಕಾ ಅಭಿಯಾನ
ಮಂಗಳೂರು, ಜೂ.27: ಜುಲೈನಲ್ಲಿ ಕಾಲೇಜು ತರಗತಿಗಳು ಆರಂಭಗೊಳ್ಳುವ ಸಾಧ್ಯತೆಯಿರುವುದರಿಂದ ರಾಜ್ಯ ಸರಕಾರದ ಆದೇಶದ ಮೇರೆಗೆ ದ.ಕ.ಜಿಲ್ಲೆಯಲ್ಲಿ ಜೂ.28ರಿಂದ ಮುಂದಿನ ಎರಡು ವಾರಗಳ ಕಾಲ 18+ ವಯೋಮಾನದ ವಿದ್ಯಾರ್ಥಿಗಳಿಗೆ ಮತ್ತು ಕಾಲೇಜು ಸಿಬ್ಬಂದಿ ವರ್ಗಕ್ಕೆ ಲಸಿಕಾ ಅಭಿಯಾನ ನಡೆಸಲಾಗುವುದು ದ.ಕ.ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆಯ ಪ್ರಕಟನೆ ತಿಳಿಸಿದೆ.
ಜಿಲ್ಲೆಯ ಪದವಿ/ಡಿಪ್ಲೊಮಾ, ಐಟಿಐ, ಇಂಜಿನಿಯರಿಂಗ್, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಮತ್ತು ಬೋಧಕರು ಮತ್ತು ಬೋಧ ಕೇತರ ವರ್ಗ ಸಹಿತ ಸುಮಾರು 1.80 ಲಕ್ಷ ಮಂದಿ ಇದ್ದಾರೆ. ಇವರಿಗೆಲ್ಲಾ ಏಕಕಾಲಕ್ಕೆ ಕೋವಿಡ್ ಪ್ರತಿರೋಧ ಲಸಿಕೆಯನ್ನು ನೀಡಲು ಸಾಧ್ಯವಿಲ್ಲ. ಸರಕಾರ ಕಳುಹಿಸಿಕೊಟ್ಟ ಲಸಿಕೆಯನ್ನು ಹಂತಹಂತವಾಗಿ ಶಿಕ್ಷಣ ಸಂಸ್ಥೆಗಳಿಗೆ ವಿತರಿಸುವ ಯೋಜನೆ ರೂಪಿಸಲಾಗಿದೆ.
ಜೂ.28ರಂದು ನಗರದ ಸಂತ ಅಲೋಶಿಯಸ್ ಕಾಲೇಜು, ಬಲ್ಮಠ ಸರಕಾರಿ ಮಹಿಳಾ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು, ನಗರದ ರಾಮಕೃಷ್ಣ ಕಾಲೇಜು, ಕಾರ್‌ಸ್ಟ್ರೀಟ್‌ನ ಸರಕಾರಿ ಕಾಲೇಜು, ಕೂಳೂರಿನ ಮೊಗವೀರ ಭವನ, ಸುರತ್ಕಲ್‌ನ ಗೋವಿಂದದಾಸ್ ಕಾಲೇಜು, ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಲಸಿಕೆ ಅಭಿಯಾನ ಆಯೋಜಿಸಲಾಗಿದೆ. ಲಸಿಕೆ ಪಡೆಯಲು ನಮೂನೆ 3 ಅರ್ಜಿ ಭರ್ತಿ ಮಾಡಿ, ಪ್ರಾಂಶುಪಾಲರ ಸಹಿ ಹಾಕಿ ತರಬೇಕು. ಅಲ್ಲದೆ ಕಾಲೇಜಿನ ಗುರುತು ಚೀಟಿ ಮತ್ತು ಆಧಾರ್ ಕಾರ್ಡ್‌ನ್ನು ಕೂಡ ತರಬೇಕು ಎಂದು ತಿಳಿಸಲಾಗಿದೆ. ಅದಲ್ಲದೆ ಜೂ.28ರಂದು ಜಿಲ್ಲೆಯ ನಗರ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು,ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲೂ ಕೋವಿಡ್ ಲಸಿಾ ಶಿಬಿರ ನಡೆಯಲಿದೆ ಎಂದು ತಿಳಿಸಿದೆ.







