ಕಾಣೆಯಾಗಿದ್ದ ಬ್ರಿಟಿಶ್ ರಕ್ಷಣಾ ದಾಖಲೆಗಳು ಬಸ್ ನಿಲ್ದಾಣದ ಕಸದ ರಾಶಿಯಲ್ಲಿ ಪತ್ತೆ
ಬ್ರಿಟನ್,ಜು.21:ಯುದ್ಧನೌಕೆ ಹಾಗೂ ಬ್ರಿಟಿಶ್ ಸೇನೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಒಳಗೊಂಡ ವರ್ಗೀಕೃತ ದಾಖಲೆಗಳು ಆಗ್ನೇಯ ಇಂಗ್ಲೆಂಡ್ ನ ಬಸ್ ನಿಲ್ದಾಣವೊಂದರಲ್ಲಿ ಪತ್ತೆಯಾಗಿರುವುದಾಗಿ ಮಾಧ್ಯಮ ವರದಿಯೊಂದು ರವಿವಾರ ತಿಳಿಸಿದೆ.
ಬ್ರಿಟನ್ನ ಕೆಲವು ರಕ್ಷಣಾ ದಾಖಲೆಗಳು ನಾಪತ್ತೆಯಾಗಿರುವುದಾಗಿ ಬ್ರಿಟನ್ನ ರಕ್ಷಣಾ ಸಚಿವಾಲಯದ ಉದ್ಯೋಗಿಯೊಬ್ಬರು ಕಳೆದವಾರ ದೂರು ನೀಡಿದ್ದರು. ಈ ದಾಖಲೆಗಳನ್ನು ಮಂಗಳವಾರ ಬೆಳಗ್ಗೆ ಕೆಂಟ್ ನಗರದ ಬಸ್ ನಿಲ್ದಾಣದ ಹಿಂದುಗಡೆಯಿರುವ ರದ್ದಿಯ ರಾಶಿಯಲ್ಲಿ ಸಾರ್ವಜನಿಕರೊಬ್ಬರು ಪತ್ತೆಯಾಗಿರುವುದಾಗಿ ಬಿಬಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ದಾಖಲೆಗಳ ಪೈಕಿ ಉಕ್ರೇನ್ನ ಕ್ರಿಮಿಯಾ ಸಮೀಪದ ಸಾಗರಪ್ರದೇಶದಲ್ಲಿ ಬುಧವಾರ ಹಾದುಹೋಗಲಿರುವ ಬ್ರಿಟನ್ನ ಎಚ್ಎಂಎಸ್ ಡಿಫೆಂಡರ್ ಯುದ್ಧನೌಕೆಗೆ ರಶ್ಯದ ಪ್ರತಿಕ್ರಿಯೆಯನ್ನು ಹೇಗಿರಬಹುದೆಂದು ಚರ್ಚಿಸಲಾಗಿತ್ತು ಹಾಗೂ ಇನ್ನೊಂದು ದಾಖಲೆಯಲ್ಲಿ ಅಮೆರಿಕ ನೇತೃತ್ವದ ನ್ಯಾಟೊ ಪಡೆಗಳು ಈ ವರ್ಷಾಂತ್ಯದಲ್ಲಿ ಅಫ್ಘಾನಿಸ್ತಾನದಲ್ಲಿ ಸೇನಾ ಕಾರ್ಯಾಚರಣೆಯನ್ನು ಕೊನೆಗೊಳಿಸಿದ ಬಳಿಕ ಆ ದೇಶದಲ್ಲಿ ಬ್ರಿಟನ್ನ ಸಂಭಾವ್ಯ ಉಪಸ್ಥಿತಿಯ ಕುರಿತಾದ ಯೋಜನೆಗಳನ್ನು ಹೊಂದಿತ್ತು ಎನ್ನಲಾಗಿದೆ.
ಬ್ರಿಟನ್ ನ ಮಹತ್ವದ ರಕ್ಷಣಾ ದಾಖಲೆಗಳು ನಿಗೂಢವಾಗಿ ನಾಪತ್ತೆಯಾದ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.
50ಕ್ಕೂ ಅಧಿಕ ಪುಟಗಳನ್ನು ಒಳಗೊಂಡಿದ್ದ ಈ ದಾಖಲೆಗಳು ಅತ್ಯಂತ ಸೂಕ್ಷ್ಮವಾದ ವಿಷಯಗಳನ್ನು ಒಳಗೊಂಡಿವೆಯೆಂದು ಅರಿತುಕೊಂಡ ಬಳಿಕ ತಾನು ಬಿಬಿಸಿ ಸುದ್ದಿಸಂಸ್ಥೆಯನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾಗಿ ಅವುಗಳನ್ನು ಪತ್ತೆ ಹಚ್ಚಿದ ನಾಗರಿಕ ತಿಳಿಸಿದ್ದಾರೆ. ಈ ದಾಖಲೆಗಳನ್ನು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಯ ಕಚೇರಿಯಲ್ಲಿ ರಚಿಸಿರಬಹುದೆಂದು ಬಿಬಿಸಿ ಸುದ್ದಿಸಂಸ್ಥೆ ಹೇಳಿದೆ.







