ಅಯೋಧ್ಯೆ ಭೂಹಗರಣದ ಬಗ್ಗೆ ಸಿಬಿಐ ತನಿಖೆ ಯಾಕಿಲ್ಲ: ಕೇಂದ್ರಕ್ಕೆ ಶಿವಸೇನೆ ಪ್ರಶ್ನೆ
ಮುಂಬೈ, ಜೂ.೨೭: ಸಿಬಿಐ, ಜಾರಿ ನಿರ್ದೇಶನಾಲಯದಂತಹ ಕೇಂದ್ರೀಯ ತನಿಖಾ ತಂಡಗಳನ್ನು ರಾಜಕೀಯ ದ್ವೇಷ ಸಾಧನೆಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಶಿವಸೇನೆ, ಅಯೋಧ್ಯೆ ಭೂಹಗರಣದ ತನಿಖೆಯನ್ನು ಯಾಕೆ ಇವುಗಳಿಗೆ ವಹಿಸಿಲ್ಲ ಎಂದು ಪ್ರಶ್ನಿಸಿದೆ.
ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷ್ ಸರಕಾರದ ದಬ್ಬಾಳಿಕೆಗೆ ಅಂಜಲಿಲ್ಲ, ಆದರೆ ಸ್ವತಂತ್ರ ಭಾರತದಲ್ಲಿ ರಾಜಕೀಯ ಕಾರ್ಯಕರ್ತರು ಕೇಂದ್ರ ತನಿಖಾ ತಂಡಗಳ ಬಗ್ಗೆ ಭಯ ಪಡುವಂತಾಗಿದೆ. ಸ್ವಾತಂತ್ರ್ಯ ಹೋರಾಟಗಾರರು ಎದೆಗುಂದದೆ ಜೈಲಿಗೆ ಹೋದರು. ಆದರೆ ರಾಜಕೀಯ ಕಾರ್ಯಕರ್ತರನ್ನು ಕಿರುಕುಳ ನೀಡಿ ಶರಣಾಗುವಂತೆ ಮಾಡಲಾಗುತ್ತಿದೆ ಎಂದು ಪಕ್ಷದ ಮುಖವಾಣಿ ʼಸಾಮ್ನ'ದ ಸಾಪ್ತಾಹಿಕ ಅಂಕಣಬರಹದಲ್ಲಿ ಶಿವಸೇನೆಯ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ನಿವಾಸಕ್ಕೆ ಸಿಬಿಐ ನಡೆಸಿದ ದಾಳಿಯನ್ನು ಉಲ್ಲೇಖಿಸಿದ ಅವರು, ದೇಶ್ಮುಖ್ ಚಂಬಲ್ ಕಣಿವೆಯ ಡಕಾಯಿತನಂತೆ ಬಿಂಬಿಸಿ ದಾಳಿ ನಡೆಸಲಾಗಿದೆ. ತನಿಖಾ ಸಂಸ್ಥೆಗಳಿಗೆ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ಸರಕಾರಗಳನ್ನು ಗುರಿಯಾಗಿಸುವಂತೆ ಸೂಚಿಸಿರುವ ಶಂಕೆ ಮೂಡುತ್ತಿದೆ ಎಂದರು.
೧೯೭೫ರಿಂದಲೂ ಕೇಂದ್ರ ತನಿಖಾ ತಂಡಗಳನ್ನು ರಾಜಕೀಯ ಸಾಧನವನ್ನಾಗಿ ಬಳಸಲಾಗುತ್ತಿದೆ.
೨೦೧೯ರಲ್ಲಿ ಆಂಧ್ರದ ಟಿಡಿಪಿ ಸಂಸದರಾದ ವೈಎಸ್ ಚೌಧರಿ ಮತ್ತು ಸಿಎಂ ರಮೇಶ್ ವಿರುದ್ಧ ತೆರಿಗೆ ಅಕ್ರಮ ಪ್ರಕರಣ ದಾಖಲಾಗಿತ್ತು. ಆದರೆ ಅವರು ಬಿಜೆಪಿಗೆ ಸೇರಿದೊಡನೆ ಈ ಕಿರುಕುಳ ನಿಂತಿತು. ಇಂತಹ ಕಿರುಕುಳದಿಂದಲೇ ಸರ್ನಾಯಕ್ರಂತಹ ಆಕ್ರಮಣಕಾರಿ ಮುಖಂಡ ಕೂಡಾ ಕೇಂದ್ರಕ್ಕೆ ಶರಣಾಗಬೇಕಾಗಿದೆ. ಈ ಹಿಂದೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರೋಧ ಪಕ್ಷದಲ್ಲಿದ್ದಾಗ ಅವರ ವಿರುದ್ಧವೂ ಇದೇ ರೀತಿಯ ಕಿರುಕುಳ ನಡೆದಿದೆ. ಒಟ್ಟಿನಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ಕೇಂದ್ರ ಸರಕಾರದ ಕೈಗೊಂಬೆಗಳಾಗಿವೆ ಎಂದು ರಾವತ್ ಹೇಳಿದ್ದಾರೆ.