ಬ್ರಿಟನ್ ಆರೋಗ್ಯ ಸಚಿವರಾಗಿ ಸಾಜಿದ್ ಜಾವಿದ್ ನೇಮಕ

ಲಂಡನ್,ಜೂ.27: ಬ್ರಿಟನ್ ನ ನೂತನ ಆರೋಗ್ಯ ಸಚಿವರಾಗಿ ಸಾಜಿದ್ ಜಾವಿದ್ ಅವರನ್ನು ರವಿವಾರ ನೇಮಕಗೊಳಿಸಲಾಗಿದೆ. ಮ್ಯಾಟ್ಹ್ಯಾನ್ ಕಾಕ್ ರಾಜೀನಾಮೆಯಿಂದ ತೆರವಾದ ಸ್ಥಾನವನ್ನು ಸಾಜಿದ್ ತುಂಬಲಿದ್ದಾರೆಂದು ಪ್ರಧಾನಿ ಬೊರಿಸ್ ಜಾನ್ಸನ್ ಸಚಿವಾಲಯವು ರವಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಕಳೆದ ವರ್ಷ ಬೊರಿಸ್ ಜಾನ್ಸನ್ ಸಂಪುಟದಲ್ಲಿ ಜಾವಿದ್ ವಿತ್ತ ಸಚಿವರಾಗಿದ್ದರು. ಆದರೆ ತನ್ನ ರಾಜಕೀಯ ಸಲಹೆಗಾರರನ್ನು ಉಚ್ಚಾಟಿಸಬೇಕೆಂಬ ಜಾನ್ಸನ್ ಅವರ ಬೇಡಿಕೆಯನ್ನು ತಳ್ಳಿಹಾಕಿದ್ದ ಜಾವಿದ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಹಾಲಿ ಬೊರಿಸ್ ಜಾನ್ಸನ್ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದ ಮ್ಯಾಟ್ಹ್ಯಾನ್ಕಾಕ್, ಇತ್ತೀಚೆಗೆ ಕೋವಿಡ್ ಶಿಷ್ಟಾಚಾರಗಳನ್ನು ಉಲ್ಲಂಘಿಸಿ ಕಚೇರಿಯಲ್ಲಿ ತನ್ನ ಸಹಾಯಕಿಯನ್ನು ಚುಂಬಿಸಿದ ಹಾಗೂ ತಬ್ಬಿಕೊಂಡ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಸಂಕಷ್ಟದಲ್ಲಿರುವ ಬ್ರಿಟನ್ನ ಸರಕಾರಿ ಆರೋಗ್ಯ ಸೇವೆಯನ್ನು ಪುನಶ್ಚೇತನಗೊಳಿಸುವ ಹೊಣೆಗಾರಿಕೆ ಜಾವಿದ್ ಅವರ ಮೇಲಿದೆ. ಕಳೆದ ತಿಂಗಳಲ್ಲಿ ಬ್ರಿಟನ್ನಲ್ಲಿ ಮತ್ತೆ ಕೊರೋನ ಸೋಂಕಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಸರಕಾರದ ದುಗುಡವನ್ನು ಹೆಚ್ಚಿಸಿದೆ.





