ಎರಡು ವರ್ಷಗಳಿಂದ ಸೌದಿಯಲ್ಲಿ ಸಿಲುಕಿಕೊಂಡಿದ್ದ ಮಹಿಳೆಯ ರಕ್ಷಣೆ
ಉಡುಪಿ, ಜೂ.27: ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿ, ವಾಪಾಸ್ಸು ಊರಿಗೆ ಬರಲಾಗದೆ ಕಳೆದ ಎರಡು ವರ್ಷಗಳಿಂದ ಅಲ್ಲೇ ಸಿಲುಕಿಕೊಂಡಿದ್ದ ದಾವಣಗೆರೆ ಮೂಲದ ಮಹಿಳೆಯೊಬ್ಬರನ್ನು ಸಾಮಾಜಿಕ ಕಾರ್ಯಕರ್ತರು ತಮ್ಮ ಸತತ ಪ್ರಯತ್ನದ ಮೂಲಕ ಊರಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾವಣಗೆರೆಯ ಆಝಾದ್ ನಗರದ ನಿವಾಸಿ ಮಕ್ಬೂಲ್ ಸಾಹೆಬ್ ಎಂಬವರ ಮಗಳು ಫೈರೋಝಾ ಬಾನು ಎರಡು ವರ್ಷಗಳ ಹಿಂದೆ ಸೌದಿ ಅರೇಬಿಯಾಕ್ಕೆ ವಿಸಿಟ್ ವಿಸಾದಲ್ಲಿ ಮನೆ ಕೆಲಸಕ್ಕಾಗಿ ತೆರಳಿದ್ದರು. ಅಲ್ಲಿ ತಮ್ಮ ಮನೆ ಮಾಲಕನಿಂದ ಬಹಳಷ್ಟು ತೊಂದರೆಗೊಳಗಾಗಿದ್ದ ಪೈರೋಝಾ ಬಾನು, ತನ್ನನ್ನು ಊರಿಗೆ ಕಳುಹಿಸುವಂತೆ ಕೇಳಿಕೊಂಡಿದ್ದರು. ಇದಕ್ಕೆ ಒಪ್ಪದ ಮಾಲಕ, ಫೈರೋಝಾರನ್ನು ಅಲ್ಲೇ ಉಳಿಸಿಕೊಂಡಿದ್ದರು ಎಂದು ದೂರಲಾಗಿದೆ.
ಈ ವಿಚಾರವನ್ನು ಪೈರೋಝ ತನ್ನ ಸಹೋದರಿ ನಸ್ರೀನಾ ಬಾನುರಲ್ಲಿ ತಿಳಿಸಿ, ತನ್ನನ್ನು ರಕ್ಷಿಸುವಂತೆ ಕೇಳಿಕೊಂಡಿದ್ದಳು. ಆ ಹಿನ್ನೆಲೆಯಲ್ಲಿ ನಸ್ರೀನಾ ಬಾನು ಸರಕಾರಕ್ಕೆ ಮನವಿ ಮಾಡಿದರು. ಆದರೆ ಅದರಿಂದ ಯಾವುದೇ ಪ್ರಯೋಜನ ಆಗಿರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದುಕೊಂಡ ರಿಯಾದ್‌ನ ರಕ್ಷಣಾ ಕಂಪೆನಿ ಯೊಂದರಲ್ಲಿ ಕಾನೂನು ಸಲಹೆಗಾರರಾಗಿರುವ, ವಕೀಲ ಮತ್ತು ಸಮಾಜ ಸೇವಕ ಪಿ.ಎ.ಹಮೀದ್ ಪಡುಬಿದ್ರಿ, ಅಲ್-ಕುರಯತ್‌ನಲ್ಲಿರುವ ಸಮಾಜ ಸೇವಕ ಕೇರಳದ ತ್ರಿಶೂರ್ ನಿವಾಸಿ ಸಲೀಂ ಕೊಡುಂಗಲ್ಲೂರ್ ರವರ ಸಹಕಾರ ದೊಂದಿಗೆ ಪೈರೋಝಾ ಬಾನು ನೆಲೆಸಿರುವ ವಿಳಾಸವನ್ನು ಪತ್ತೆಹಚ್ಚಿದರು.
ಇದಕ್ಕೆ ದಮಾಮ್‌ನಲ್ಲಿರುವ ಸಾಮಾಜಿಕ ಕಾರ್ಯಕರ್ತ ಯಾಸೀನ್ ಕಲುಬುರ್ಗಿ ಕೂಡ ಸಾಥ್ ನೀಡಿದರು. ಈ ಸಂಬಂಧ ಸಾಮಾಜಿಕ ಕಾರ್ಯ ಕರ್ತರು ಮನೆ ಮಾಲಿಕನೊಂದಿಗೆ ಸಂಧಾನ ನಡೆಸಿದರು. ಆಗ ಈ ಮನೆಯಲ್ಲಿ ಕಳೆದ ಮೂರು ವರ್ಷಗಳಿಂದ ಸಿಲುಕಿಕೊಂಡಿರುವ ತುಮಕೂರಿನ ಸಬಿಹಾ ಎಂಬವರು ಪತ್ತೆಯಾದರು.
ಸಂಧಾನ ಫಲಿಸದ ಕಾರಣ, ಹಮೀದ್, ಪೈರೋಝಾ ಬಾನು ಮತ್ತು ತುಮಕೂರ್ ಮೂಲದ ಸಬಿಹಾರ ಬಗ್ಗೆ, ರಿಯಾದ್‌ನಲ್ಲಿರುವ ಭಾರತೀಯ ರಾಯಬಾರಿ ಕಚೇರಿಗೆ ಟ್ವೀಟ್ ಮಾಡಿ ದೂರು ಸಲ್ಲಿಸಿದರು. ಹಾಗೇ ಇತರ ಕಚೇರಿಗಳಿಗೂ ದೂರು ನೀಡಲಾಯಿತು. ಅದರಂತೆ ಕಾರ್ಯ ಪ್ರವೃತ್ತರಾದ ರಾಯಭಾರಿ ಕಚೇರಿ ಅಧಿಕಾರಿಗಳು ಮಾಲಕನ ವಿರುದ್ಧ ಸ್ಥಳೀಯ ಪೊಲೀಸರಿಗೆ ದೂರು ನೀಡಿದರು. ಅದರಂತೆ ಪೊಲೀಸರು ಅವರಿಬ್ಬರನ್ನು ಭಾರತಕ್ಕೆ ಕಳುಹಿಸಿಕೊಡುವಂತೆ ಮನೆ ಮಾಲಕನಿಗೆ ಸೂಚಿಸಿದರು. ಈ ಹಿನ್ನೆಲೆ ಯಲ್ಲಿ ಮಾಲಕ ಒಪ್ಪಿಗೆ ಸೂಚಿಸಿದ್ದು, ಪೈರೋಝ ಕಳೆದ ಶುಕ್ರವಾರ ರಿಯಾದ್ ನಿಂದ ಕತರ್ ಮೂಲಕ, ಶನಿವಾರ ಬೆಳಿಗ್ಗೆ ಬೆಂಗಳೂರಿಗೆ ತಲುಪಿದರು.
ಸಬಿಹಾರನ್ನು ಆದಷ್ಟು ಶೀಘ್ರವಾಗಿ ಊರಿಗೆ ಕಳುಹಿಸುವ ಎಲ್ಲಾ ರೀತಿಯ ಕಾನೂನಾತ್ಮಕ ಪ್ರಕ್ರಿಯೆಗಳು ನಡೆಯುತ್ತಿದ್ದು, ಮುಂದಿನ ವಾರದಲ್ಲೇ ಅವರು ತಮ್ಮ ತಾಯ್ನಿಡಿಗೆ ಮರಳುವ ಸಾಧ್ಯತೆ ಇದೆ ಎಂದು ಪಿ.ಎ.ಹಮೀದ್ ಪಡಬಿದ್ರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.







