ಕೆಐಓಸಿಎಲ್ ನಿಂದ ಬಳ್ಳಾರಿ ದೇವದರಿಯಲ್ಲಿ ಗಣಿಗಾರಿಕೆ: ಎಂ.ವಿ.ಸುಬ್ಬರಾವ್

ಮಂಗಳೂರು, ಜೂ. 28: ಬಳ್ಳಾರಿಯ ದೇವದರಿ ಪರ್ವತ ಶ್ರೇಣಿಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಕೆಐಓಸಿಎಲ್‌ಗೆ ಅನುಮತಿ ದೊರಕಿದ್ದು, 2021-22ನೇ ಸಾಲಿನ ಹಣಕಾಸು ವರ್ಷದಲ್ಲಿ ಗಣಿಗಾರಿಕೆ ಆರಂಭವಾಗಲಿದೆ ಎಂದು ಕೆಐಓಸಿಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂ.ವಿ.ಸುಬ್ಬರಾವ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಅವರು, 1,500 ಕೋಟಿ ರೂ.ಗಳ ಐದು ವರ್ಷಗಳ ಯೋಜನೆ ಇದಾಗಿದ್ದು, ಭಾರತ ಸರಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯ 401.5761 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆಗೆ ಪ್ರಥಮ ಹಂತದ ಅನುಮತಿ ನೀಡಿದೆ ಎಂದರು.
ಪೂರ್ವ ಗಣಿಗಾರಿಕೆ ವೆಚ್ಚವಾಗಿ 300 ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ದೊರಕಿದ್ದು, ಈ ಐದು ವರ್ಷಗಳ ಯೋಜನೆಯಡಿ ಸುಮಾರು 1,000 ಮಂದಿಗೆ ಉದ್ಯೋಗ ದೊರಕಲಿದೆ. ಜತೆಗೆ ಕೆಐಓಸಿಎಲ್‌ನಿಂದ ಕಳೆದ 15 ವರ್ಷಗಳ ಬಳಿಕ ಕರ್ನಾಟಕದಲ್ಲಿ ಗಣಿಗಾರಿಕೆ ಇಲ್ಲಿ ಮತ್ತೆ ಆರಂಭಗೊಳ್ಳಲಿದೆ ಎಂದು ಅವರು ಹೇಳಿದರು.
ಕೆಐಓಸಿಎಲ್ ಕಳೆದ ನಾಲ್ಕು ವರ್ಷಗಳಲ್ಲಿ ಉತ್ತಮ ಸಾಧನೆಯನ್ನು ತೋರಿದ್ದು, ಕೊರೋನ ಸಂಕಷ್ಟದ ನಡುವೆಯೂ ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ಸಂಸ್ಥೆಯು 2,477.83 ಕೋಟಿ ರೂ.ಗಳ ಆದಾಯದೊಂದಿಗೆ 301.17 ಕೋಟಿ ರೂ. (ತೆರಿಗೆ ಬಳಿಕ) ಲಾಭವನ್ನು ಗಳಿಸಿದೆ. 2021ರ ಮಾರ್ಚ್ ಅಂತ್ಯದವರೆಗಿನ ಪ್ರಥಮ ತ್ರೈಮಾಸಿಕದಲ್ಲಿ 939.71 ಕೋಟಿ ರೂ.ಗಳ ವ್ಯವಹಾರದೊಂದಿಗೆ 194 ಕೋಟಿ ರೂ.ಗಳ ಲಾಭವನ್ನು ಗಳಿಸಿದೆ ಎಂದು ಅವರು ಹೇಳಿದರು.
ಶೇ. 99ರಷ್ಟು ಮಂದಿಗೆ ಲಸಿಕೆ
ಸಂಸ್ಥೆಯ ಸಿಬ್ಬಂದಿ, ಹೊರ ಗುತ್ತಿಗೆ ಸಿಬ್ಬಂದಿ, ವಲಸೆ ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ಸೇರಿ ಶೇ. 99ರಷ್ಟು ಮಂದಿಗೆ ಕೊರೋನ ತಡೆ ಲಸಿಕೆಯನ್ನು ನೀಡಲಾಗಿದೆ. ತನ್ನ ಸಿಆರ್‌ಎಸ್ ನಿಧಿಯಿಂದ ಕೊರೋನ ನಿಯಂತ್ರಣದ ಹಿನ್ನೆಲೆಯಲ್ಲಿ ವೆನ್‌ಲಾಕ್ ಆಸ್ಪತ್ರೆಗೆ ಕಳೆದ ವಾರ ಆ್ಯಂಬುಲೆನ್ಸ್ ಕೊಡುಗೆಯಾಗಿಯೂ ನೀಡಿದೆ ಎಂದು ಎಂ.ವಿ.ಸುಬ್ಬರಾವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಐಓಸಿಎಲ್‌ನ (ಉತ್ಪಾದನೆ) ನಿರ್ದೇಶಕರಾದ ಭಾಸ್ಕರ್ ರೆಡ್ಡಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಮುರುಗೇಶ್ ಉಪಸ್ಥಿತರಿದ್ದರು.







