ಇಂಡಿಯಾನ ಆಸ್ಪತ್ರೆಯಿಂದ ಅಪರೂಪದ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ

ಮಂಗಳೂರು, ಜೂ.28: ನಗರದ ಇಂಡಿಯಾನಾ ಹಾಸ್ಪಿಟಲ್ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್ ಲಿಮಿಟೆಡ್ನಿಂದ 70 ವರ್ಷದ ರೋಗಿಯೊಬ್ಬರಿಗೆ ಅಪರೂಪದ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಯೂಸುಫ್ ಕುಂಬ್ಳೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ಕುರಿತು ಮಾಹಿತಿ ನೀಡಿದ ಅವರು, ಹೃದಯದ ಧಮನಿಯ ಬ್ಲಾಕ್ ಗಳನ್ನು ಆಂಜಿಯೋಪ್ಲಾಸ್ಟಿ ಮತ್ತು ಟ್ರಾನ್ಸ್ ಕ್ಯಾಥಿಟರ್ ಆರ್ಟಿಕ್ ವಾಲ್ವ್ ಇಂಪ್ಲಾಂಟೇಶನ್ ಮೂಲಕ ತೆರವುಗೊಳಿಸಿ ಮಹತ್ವದ ಮೈಲಿಗಲ್ಲು ಸಾಧಿಸಲಾಗಿದೆ ಎಂದು ಹೇಳಿದರು.
ಗೋವಾ ನಿವಾಸಿ ಅಹ್ಮದ್ ಖಾನ್ ಎಂಬವರು ರಕ್ತ ಧಮನಿಯಲ್ಲಿ ಅನೇಕ ಬ್ಲಾಕ್ ಗಳನ್ನು ಹೊಂದಿರುವ ತೀವ್ರವಾದ ಮಹಾಪಧಮನಿಯ ಕವಾಟದ ಸ್ಪೆನೋಸಿಸ್ ನಿಂದ ಬಳಲುತ್ತಿದ್ದು, ಎದೆನೋವು, ಉಸಿರಾಟದ ತೊಂದರೆ ಮತ್ತು ಹೃದಯ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಇಂಡಿಯಾನ ಆಸ್ಪತ್ರೆಯನ್ನು ಸಂಪರ್ಕಿಸಿದ್ದರು. ಅವರು ಈ ಮೊದಲು ಅನೇಕ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಅಲೆದಾಡಿದ್ದರು. ಆದರೆ ಈ ಹಿಂದೆ ಬ್ಲಾಕ್ ಗಳನ್ನು ತೆಗೆದು ಹಾಕಲು ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ ಅಲ್ಲಿನ ವೈದ್ಯರು ಹಿಂಜರಿದ ಕಾರಣ, ಇಂಡಿಯಾನಾ ಆಸ್ಪತ್ರೆಗೆ ಆಗಮಿಸಿದ್ದರು ಎಂದು ಡಾ. ಯೂಸುಫ್ ಕುಂಬ್ಳೆ ತಿಳಿಸಿದರು.
ಅವರು ಈ ಹಿಂದೆ ಕವಾಟಗಳನ್ನು ಬದಲಾಯಿಸಲು ಹಾಗೂ ಹೃದಯದಲ್ಲಿನ ಬ್ಲಾಕ್ ತೆಗೆಯಲು ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹಾಗಾಗಿ ಮತ್ತೆರಡು ಶಸ್ತ್ರ ಚಿಕಿತ್ಸೆಯನ್ನು ನಡೆಸುವುದು ಸವಾಲಿನ ಕೆಲಸವಾಗಿತ್ತು. ಹಾಗಿದ್ದರೂ ಒಂದು ಗಂಟೆಯ ಅವಧಿಯಲ್ಲಿ ಲೋಕಲ್ ಅನಾಸ್ತೇಶಿಯ ನೀಡಿ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಅವರ ಧಮನಿಯ ಬ್ಲಾಕ್ ಗಳನ್ನು ಅಂಜಿಯೋಪ್ಲಾಸ್ಟಿ ಮೂಲಕ ಹಾಗೂ ಟ್ರಾನ್ಸ್ಕ್ಯಾತಿಟರ್ ಮಹಾಪಧಮನಿಯ ಕವಾಟದ ಬದಲಿ/ ಇಂಪ್ಲಾಂಟೇಶನ್ ಮೂಲಕ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಐಸಿಯುನಲ್ಲಿ 24 ಗಂಟೆ ನಿಗಾ ವಹಿಸಿ, ಎರಡೂವರೆ ದಿನದ ಬಳಿಕ ಬಿಡುಗಡೆ ಮಾಡಲಾಯಿತು. ಸದ್ಯ ಅವರು ಆರೋಗ್ಯದಿಂದಿದ್ದಾರೆ ಎಂದವರು ವಿವರಿಸಿದರು.
ಎರಡು ವರ್ಷಗಳ ಹಿಂದೆ ಇಂಡಿಯಾನ ಆಸ್ಪತ್ರೆಯಲ್ಲಿ ಕರಾವಳಿ ಮತ್ತು ಮಲೆನಾಡು ಕರ್ನಾಟಕದಲ್ಲಿ ಮೊದಲ ಬಾರಿಗೆ ಟಾವಿ ವಿಧಾನದಲ್ಲಿ ಚಿಕಿತ್ಸೆ ನೀಡಲಾಗಿತ್ತು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯಚಂದ್ರ ಉಪಸ್ಥಿತರಿದ್ದರು.







