ಹಿರಿಯ ಪತ್ರಕರ್ತ ಪಿ ಸಾಯಿನಾಥ್ ಅವರಿಗೆ ಒಲಿದ ಜಪಾನ್ ನ ಪ್ರತಿಷ್ಠಿತ ಫುಕುವೊಕ ಗ್ರ್ಯಾಂಡ್ ಪ್ರೈಝ್ 2021

ಹೊಸದಿಲ್ಲಿ: ಖ್ಯಾತ ಪತ್ರಕರ್ತ ಹಾಗೂ ಪರಿ (ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ) ಸ್ಥಾಪಕ ಪಿ ಸಾಯಿನಾಥ್ ಅವರಿಗೆ ಜಪಾನ್ ದೇಶದ ಪ್ರತಿಷ್ಠಿತ ಫುಕುವೊಕ ಗ್ರ್ಯಾಂಡ್ ಪ್ರೈಝ್ 2021 ದೊರಕಿದೆ.
ಈ ಹಿಂದೆ ದಿ ಹಿಂದು ಪತ್ರಿಕೆಗೆ ಸೇವೆ ಸಲ್ಲಿಸಿದ್ದ ಸಾಯಿನಾಥ್ ಅವರ ಕೃತಿ "ಎವ್ರಿಬಡಿ ಲವ್ಸ್ ಎ ಗುಡ್ ಡ್ರೌಟ್" ಗ್ರಾಮೀಣ ಭಾರತದ ಸಮಸ್ಯೆಗಳಿಗೆ ಕೈಗನ್ನಡಿಯಾಗಿದೆ.
"ಅವರ ಅತ್ಯುನ್ನತ ವೃತ್ತಿಯ ಹೊರತಾಗಿಯೂ ಅವರು ಸದಾ ಜ್ಞಾನವನ್ನು ಅರಸುತ್ತಿದ್ದಾರೆ. ಹಳ್ಳಿಗಳಲ್ಲಿ ಸಂಚರಿಸಿ ಜನರ ಜತೆ ಮಾತನಾಡಿ ಮಾಹಿತಿ ಸಂಗ್ರಹಿಸುತ್ತಾರೆ ಹಾಗೂ ವಾಸ್ತವವನ್ನು ಛಾಯಾಚಿತ್ರಗಳಲ್ಲಿ ಸೆರೆಹಿಡಿದು ಬಡತನ ಹಾಗೂ ಪ್ರಾಕೃತಿಕ ವಿಪತ್ತುಗಳ ನೈಜಚಿತ್ರಣವನ್ನು ಮುಂದಿಡುತ್ತಾರೆ" ಎಂದು ಪ್ರಶಸ್ತಿಪತ್ರದಲ್ಲಿ ವಿವರಿಸಲಾಗಿದೆ.
ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಈ ಹಿಂದೆ 2016ರಲ್ಲಿ ಖ್ಯಾತ ಭಾರತೀಯ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಪಡೆದಿದ್ದರು.
ಫುಕುವೊಕ ಪ್ರಶಸ್ತಿಯನ್ನು ಮೂರು ವಿಭಾಗಗಳಲ್ಲಿ ನೀಡಲಾಗುತ್ತಿದ್ದು ಇತಿಹಾಸ ತಜ್ಞೆ ರೊಮಿಳಾ ಥಾಪರ್ ಹಾಗೂ ಸರೋದ್ ವಾದಕ ಉಸ್ತಾದ್ ಅಮ್ಜದ್ ಆಲಿ ಖಾನ್ ಅವರಿಗೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿಭಾಗದ ಪ್ರಶಸ್ತಿಗಳು ಒಲಿದಿವೆ.
ಮ್ಯಾಗ್ಸೆಸೆ ಪ್ರಶಸ್ತಿಗಿಂತಲೂ ಈ ಪ್ರಶಸ್ತಿ ಭಾಗವಾಗಿ ದೊಡ್ಡ ಮೊತ್ತದ ನಗದು ಬಹುಮಾನ ನೀಡಲಾಗುತ್ತದೆ.
ಫುಕುವೊಕ ನಗರ ಹಾಗೂ ಫುಕುವೊಕ ಸಿಟಿ ಇಂಟರ್ ನ್ಯಾಷನಲ್ ಫೌಂಡೇಶನ್ ಜಂಟಿಯಾಗಿ ಈ ಪ್ರಶಸ್ತಿಯನ್ನು ನೀಡುತ್ತಿವೆ.







