ನ್ಯಾಯಾಂಗ ನಿಂದನೆ ಆರೋಪ: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಎಫ್‍ಐಆರ್

ಬೆಂಗಳೂರು, ಜೂ.28: ನ್ಯಾಯಾಂಗ ನಿಂದನೆ ಆರೋಪದಡಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಮಾಡದಂತೆ ಬಿಡಿಎ ವಿರುದ್ಧ, ಸಾರ್ವಜನಿಕರನ್ನು, ಭೂಮಾಲಕರಾದ ರೈತರನ್ನು ಎತ್ತಿಕಟ್ಟಿ ಪ್ರತಿಭಟನೆ ನಡೆಸಿದ ಆರೋಪ ಸಂಬಂಧ ಬಿಡಿಎ ಡಾ.ಶಿವರಾಮ ಕಾರಂತ ಬಡಾವಣೆ ವಿಭಾಗದ ಕಾರ್ಯಪಾಲಕ ಅಭಿಯಂತರ ನೀಡಿದ ದೂರಿನನ್ವಯ ಮೊಕದ್ದಮೆ ದಾಖಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ನಿವೃತ್ತ ನ್ಯಾಯಮೂರ್ತಿ ಎ. ವಿ.ಚಂದ್ರಶೇಖರ್, ಶಿವರಾಮ ಕಾರಂತ ಬಡಾವಣೆ ನಿರ್ಮಾಣ ವಿಚಾರದಲ್ಲಿ ಸುಪ್ರೀಂಕೋರ್ಟ್ ನೇಮಿಸಿದ್ದ ಸಮಿತಿಗೆ, ದಾಖಲೆಗಳನ್ನು ನೀಡದಂತೆ ಕೋಡಿಹಳ್ಳಿ ಚಂದ್ರಶೇಖರ್ ಜನರ ದಾರಿ ತಪ್ಪಿಸಿದ್ದಾರೆ. ಹಾಗಾಗಿ, ನ್ಯಾಯಾಂಗ ನಿಂದನೆ ಅಡಿಯಲ್ಲಿ ನೋಟಿಸ್ ಕೂಡ ಕೊಡಲಾಗಿದೆ. ಅವರ ವಿರುದ್ಧ ಎಫ್‍ಐಆರ್ ದಾಖಲಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದರು.
ಸಹಾಯವಾಣಿ: 3,456 ಎಕರೆ ವಿಸ್ತೀರ್ಣದಲ್ಲಿ ಶಿವರಾಮ ಕಾರಂತ ಬಡಾವಣೆ ನಿರ್ಮಿಸಲು ಉದ್ದೇಶಿಸಲಾಗಿದೆ. ಶಿವರಾಮ ಕಾರಂತ ಬಡಾವಣೆ ಕುರಿತು ಅಹವಾಲು ಸಲ್ಲಿಸಲು ಮತ್ತೆ ಸಹಾಯವಾಣಿ ಆರಂಭಿಸಲಾಗಿದೆ. ಈವರೆಗೆ 3,580 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಜು.1ರಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭ ಆಗಲಿದೆ ಎಂದು ಅವರು ಮಾಹಿತಿ ನೀಡಿದರು.





