ಕುಂದಾಪುರ: ಕೊಡವೂರು ಮಸೀದಿ ಜಾಗ ವಾಪಾಸ್ಸು ನೀಡುವಂತೆ ಆಗ್ರಹಿಸಿ ಧರಣಿ

ಕುಂದಾಪುರ, ಜೂ.28: ವಕ್ಫ್ ಬೋರ್ಡ್‌ನಲ್ಲಿ ನೋಂದಣಿಗೊಂಡಿರುವ, ಗೆಜೆಟ್ ಅಧಿಸೂಚನೆ ಪಡೆದಿರುವ ಕೊಡವೂರು ಕಲ್ಮತ್ ಮಸೀದಿ ಜಾಗವನ್ನು ಕಾನೂನುಬಾಹಿರವಾಗಿ ರದ್ದುಗೊಳಿಸಿ ವಾಪಾಸು ಪಡೆದ ಸರಕಾರದ ಕ್ರಮವನ್ನು ಖಂಡಿಸಿ ಜಸ್ಟೀಸ್ ಫಾರ್ ಕಲ್ಮತ್ ಮಸ್ಜೀದ್ ಹೋರಾಟ ಸಮಿತಿಯ ನೇತೃತ್ವದಲ್ಲಿ ಸೋಮವಾರ ಮಿನಿ ವಿಧಾನಸೌಧ ಕಚೇರಿ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕುಂದಾಪುರ ತಾಲೂಕು ಸಿಎಎ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ಶಶಿಧರ ಹೆಮ್ಮಾಡಿ, ಮಸೀದಿ ಜಾಗವನ್ನು ಕೆಲವು ಕೋಮುವಾದಿ ಶಕ್ತಿಗಳು, ಹಿಂದುತ್ವವಾದಿ ಶಕ್ತಿಗಳು ಮಧ್ಯಪ್ರವೇಶಿಸಿ ಇಲ್ಲಸಲ್ಲದ ನೆವಗಳನ್ನು ಹೇಳಿ, ಕೋಮುವಾದಿ ವಾತಾವರಣವನ್ನು ಸೃಷ್ಠಿಸಿ ಸ್ಥಳೀಯ ಮುಸ್ಲಿಮರ ಮೇಲೆ ಷಡ್ಯಂತರವನ್ನು ರೂಪಿಸಿದ್ದಾರೆ. ಇದರಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಮತ್ತವರ ಸಹಚರರು ಭಾಗಿದ್ದಾರೆ ಎಂದು ಆರೋಪಿಸಿದರು.
ಯಾವುದೇ ಕೋಮು ಸಂಘರ್ಷಗಳಿಗೆ ಆಸ್ಪದ ನೀಡದಂತೆ ಕಲ್ಮತ್ ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಬೇಕು. ತಮ್ಮ ಆಸ್ತಿಯಂತೆ ಆ ಜಾಗದ ಮೇಲೆ ಹಕ್ಕು ಚಲಾಯಿಸಲು ಬಂದ ಕೋಮುವಾದಿ ಶಕ್ತಿಗಳ ಮೇಲೆ, ಮಸೀದಿ ಜಾಗದ ವಿರುದ್ಧ ತಪ್ಪು ವರದಿ ನೀಡಿದ ಜಿಲ್ಲಾಧಿಕಾರಿಯವರ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.
ಬಳಿಕ ಕುಂದಾಪುರ ತಹಸೀಲ್ದಾರ್ ಆನಂದಪ್ಪ ಕೆ.ನಾಯಕ್ ಮೂಲಕ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಪುರಸಭೆ ಸದಸ್ಯ ಅಬ್ಬು ಮುಹಮ್ಮದ್, ಕುಂದಾಪುರ ಮಸೀದಿ ಅಧ್ಯಕ್ಷ ಸಯ್ಯದ್ ನಾಸೀರ್, ಸಯ್ಯದ್ ಯಾಸೀನ್ ಸಂತೋಷನಗರ, ಲಿಯಾಖತ್ ಕಂಡ್ಲೂರು, ಹುಸೈನ್ ಹೈಕಾಡಿ, ಎನ್ಎಸ್‌ಯುಐ ಜಿಲ್ಲಾ ಕಾರ್ಯದರ್ಶಿ ಸಯ್ಯದ್ ಫುರ್ಖಾನ್ ಯಾಸೀನ್, ಅಯೂಬ್, ಅಬ್ಬಾಸ್, ನೌಷಾದ್ ಕಂಡ್ಲೂರು ಮೊದಲಾದವರು ಉಪಸ್ಥಿತರಿದ್ದರು.







