ರೇಖಾ ಕದಿರೇಶ್ ಹತ್ಯೆ ಪ್ರಕರಣ; ಶೀಘ್ರ ಸತ್ಯಾಂಶ ಬಯಲಿಗೆ: ಗೃಹ ಸಚಿವ ಬೊಮ್ಮಾಯಿ

ಉಡುಪಿ, ಜೂ.28: ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಬಂಧನಗಳಾಗಿವೆ. ಪ್ರಕರಣದಲ್ಲಿ ಹಲವಾರು ಆಯಾಮಗಳು ತೆರೆದುಕೊಳ್ಳುತ್ತಿವೆ. ಅವುಗಳ ಕೂಲಂಕಷವಾಗಿ, ಆಳವಾಗಿ ಪೊಲೀಸ್ ತನಿಖೆ ನಡೆಯುತ್ತಿದೆ ಎಂದು ರಾಜ್ಯ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಾರ್ಕಳದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಆರೋಪಿಗಳ ಶೀಘ್ರ ಬಂಧನದಿಂದ ತನಿಖೆಗೆ ಅನುಕೂಲವಾಗಿದೆ ಎಂದರು.
ಒಂದೊಂದಾಗಿಯೇ ಎಲ್ಲ ವಿಚಾರಗಳು ಹೊರಬರುತ್ತಿವೆ. ಅತಿ ಶೀಘ್ರದಲ್ಲಿ ಸಂಪೂರ್ಣ ತನಿಖೆಯಾಗಿ ಸತ್ಯಾಂಶ ಹೊರಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹತ್ಯೆಯ ಕಾರಣಗಳು ತನಿಖೆಯ ನಂತರವಷ್ಟೇ ಸ್ಪಷ್ಟಗೊಳ್ಳಲಿದೆ ಎಂದವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು. ಸಿಎಂ ಯಡಿಯೂರಪ್ಪ ಅವರಿಗೆ ಹೆಚ್ಚಿನ ಭದ್ರತೆಯ ಅಗತ್ಯವಿದೆ ಎಂದು ಇಂಟೆಲಿಜೆನ್ಸ್ ವರದಿ ತಿಳಿಸಿವೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿರುವ ಬಗ್ಗೆ ಅವರ ಗಮನ ಸೆಳೆದಾಗ, ಡಿಕೆಶಿ ಯಾವ ಇಂಟೆಲಿಜೆನ್ಸ್ ವರದಿ ಬಗ್ಗೆ ಹೇಳುತಿದ್ದಾರೋ ನನಗೆ ಗೊತ್ತಿಲ್ಲ ಎಂದು ಬೊಮ್ಮಾಯಿ ನುಡಿದರು.
ಅಂಥ ಯಾವುದೇ ಇಂಟೆಲಿಜೆನ್ಸ್ ವರದಿಯೂ ಇಲ್ಲ. ಮುಖ್ಯಮಂತ್ರಿ ಎಲ್ಲಾ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡುತಿದ್ದಾರೆ. ಮುಂದೆಯೂ ಹೋಗುತ್ತಾರೆ. ಜನರಿಂದ, ಜನರ ಮಧ್ಯದಿಂದ, ಹೋರಾಟದಿಂದ ಬಂದ ಮುಖ್ಯಮಂತ್ರಿ, ಯಾವತ್ತೂ ಜನರ ಜೊತೆ ಇರುವವರು ಅವರು. ಜನರ ಮಧ್ಯೆ ಇರುವುದಕ್ಕೆ ಯಾವುದೇ ತೆರದ ತೊಂದರೆ ಇಲ್ಲ. ಇಂಥ ಆತಂಕಗಳೇನಿದ್ದರೂ ಅದು ಕಾಂಗ್ರೆಸ್ ಪಕ್ಷಕ್ಕೆ ಎಂದು ಬೊಮ್ಮಾಯಿ ಹೇಳಿದರು.
ರಮೇಶ್ ಜಾರಕಿಹೊಳಿ ಅವರು ಮತ್ತೆ ಮುಂಬೈಗೆ ಹೋಗುತ್ತಿರುವ ವರದಿ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರಿಗೆ, ನನ್ನ ಬಳಿ ಇಂಥ ಯಾವುದೇ ಮಾಹಿತಿಗಳಿಲ್ಲ ಎಂದರು.







