ಗಂಗಾ ನದಿಯಲ್ಲಿ ಹೆಣಗಳು ತೇಲುತ್ತಿರುವುದು ಗಂಭೀರ ವಿಚಾರ, ಆದರೆ ಮಾನವಹಕ್ಕು ಆಯೋಗಕ್ಕೆ ಅರ್ಜಿ ಸಲ್ಲಿಸಿ ಎಂದ ಸುಪ್ರೀಂ

photo: nationalherald
ಹೊಸದಿಲ್ಲಿ: ಕೋವಿಡ್ ಸೋಂಕಿನಿಂದ ಮೃತರಾದವರ ಹಕ್ಕುಗಳನ್ನು ರಕ್ಷಿಸಲು, ಅಂತ್ಯಕ್ರಿಯೆಗಳಿಗೆ ಹಾಗೂ ಅಂಬ್ಯುಲೆನ್ಸ್ ಸೇವೆಗಳಿಗೆ ಹೆಚ್ಚು ದರ ವಸೂಲಿ ಮಾಡುವುದನ್ನು ತಡೆಯಲು ಒಂದು ನಿರ್ದಿಷ್ಟ ನೀತಿ ರಚಿಸಲು ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಒಂದು ಅರ್ಜಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸಲು ನಿರಾಕರಿಸಿದೆ.
ಅದೇ ಸಮಯ ಈ ಅಪೀಲನ್ನು ಸಲ್ಲಿಸಿದ್ದ ಎನ್ಜಿಒ ಟ್ರಸ್ಟ್ ಡಿಸ್ಟ್ರೆಸ್ ಮ್ಯಾನೇಜ್ಮೆಂಟ್ ಕಲೆಕ್ಟಿವ್ ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಲು ಜಸ್ಟಿಸ್ ನಾಗೇಶ್ವರ ರಾವ್ ಹಾಗೂ ಜಸ್ಟಿಸ್ ಹೇಮಂತ್ ಗುಪ್ತಾ ಅವರ ಪೀಠ ಅನುಮತಿಸಿದೆ.
"ನೀವು ಎತ್ತಿರುವ ಸಮಸ್ಯೆ ಗಂಭೀರವಾಗಿದೆ ಎಂಬುದನ್ನು ನಾವು ಒಪ್ಪುತ್ತೇವೆ, ಆದರೆ ಸುದೈವವಶಾತ್ ಈಗ ಅಂತಹ ಪರಿಸ್ಥಿತಿಯಿಲ್ಲ. ನೀವು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸಿ, ಅಲ್ಲಿ ಈ ವಿಚಾರವನ್ನು ಪರಿಗಣಿಸಲಾಗುವುದು" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇತ್ತೀಚೆಗೆ ಗಂಗಾ ನದಿಯಲ್ಲಿ ತೇಲಿ ಬಂದ ಹಲವು ಸೋಂಕಿತರ ಕಳೇಬರಗಳ ಹಿನ್ನೆಲೆಯಲ್ಲಿ ಈ ಅಪೀಲು ಸಲ್ಲಿಸಲಾಗಿದೆ ಎಂದು ಸಂಘಟನೆಯ ವಕೀಲರು ನ್ಯಾಯಾಲಯದ ಮುಂದೆ ಹೇಳಿದರಲ್ಲದೆ ಈ ವಿಚಾರವನ್ನು ಹೈಕೋರ್ಟ್ ಮುಂದೆ ಕೂಡ ಇಡಲಾಗಿತ್ತಾದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ತಿಳಿಸಿದರು.







